ಮುಂಬೈ: ಹಜಿ ಅಲಿ ದರ್ಗಾ ಪ್ರವೇಶಿಸಲು ಪ್ರಯತ್ನಿಸಿದರೆ ಮಹಿಳಾ ಕಾರ್ಯಕರ್ತೆಗೆ ಚಪ್ಪಲಿ ಸ್ವಾಗತ ಸಿಗುತ್ತದೆ ಎಂದಿದ್ದ ಶಿವಸೇನಾ ಹಿರಿಯ ನಾಯಕ ಹಜಿ ಅರಾಫತ್ ಶೇಕ್ ಅವರ ಹೇಳಿಕೆಯಿಂದ ಶಿವಸೇನೆ ಶನಿವಾರ ದೂರ ಸರಿದಿದೆ.
ಈ ಹೇಳಿಕೆಯ ನಂತರ ವಿವಿಧ ಕಡೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಪಕ್ಷದ ವಕ್ತಾರ ನೀಲಮ್ ಗಾರ್ಥೆ ಶೇಕ್ ಹೇಳಿಕೆಯನ್ನು ತಿರಸ್ಕರಿಸಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
"ಇದು ಈ ವಿವಾದದ ಮೇಲೆ ಅವರ ವ್ಯಯಕ್ತಿಕ ನಿಲುವು.. ಇದು ಶಿವಸೇನೆಯ ನಿಲುವಲ್ಲ, ನಾವು ಬಾಂಬೆ ಹೈಕೋರ್ಟ್ ನ ತೀರ್ಪನ್ನು ಗೌರವಿಸುತ್ತೇವೆ" ಎಂದು ಗಾರ್ಥೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಜಿ ಅಲಿ ದರ್ಗಾದ ಗರ್ಭಗುಡಿಯನ್ನು ಏಪ್ರಿಲ್ ೨೮ ಕ್ಕೆ ಒಳಹೊಕ್ಕುವ ಯೋಜನೆ ಹಾಕಿಕೊಂಡಿರುವ ಭೂಮಾತ ರಂರಾಗಿನಿ ಬ್ರಿಗೇಡ್ ನ ಅಧ್ಯೆಕ್ಷೆ ತೃಪ್ತಿ ದೇಸಾಯಿ ಅವರ ವಿರುದ್ಧ ಶೇಕ್ ಗುರುವಾರ ಹರಿ ಹಾಯ್ದು, ಚಪ್ಪಲಿ ಸೇವೆಯ ಬೆದರಿಕೆ ಹಾಕಿದ್ದರು.
ಶನಿ ದೇವಾಲಯ, ಟ್ರಿಂಬಕೇಶ್ವರ ದೇವಾಲಯದ ಗರ್ಭಗುಡಿಯೊಳಗೆ ಹೋಗಲು ಮಹಿಳೆಯರಿಗೂ ಸಮಾನ ಅವಕಾಶ ನೀಡಬೇಕೆಂದು ಹೋರಾಟ ನಡೆಸುತ್ತಿದ್ದ ತೃಪ್ತಿ ದೇಸಾಯಿ ಅವರಿಗೆ ಹೈಕೋರ್ಟ್ ತೀರ್ಪು ವರವಾಗಿ ಪರಿಣಮಿಸಿತ್ತು. ಈಗ ತಮ್ಮ ಹೋರಾಟವನ್ನು ವಿಸ್ತರಿಸಿ 'ಹಜಿ ಅಲಿ ಎಲ್ಲರಿಗೂ" ಎಂದು ಹಜಿ ಅಲಿ ದರ್ಗಾ ಒಳಹೊಕ್ಕಲು ಯೋಜನೆ ರೂಪಿಸಿದ್ದಾರೆ.
ದರ್ಗಾ ಒಳಗೆ ಮಹಿಳೆಯರ ಪ್ರವೇಶ ಇಸ್ಲಾಂ ನಲ್ಲಿ ನಿಷಿದ್ಧ ಎಂದಿರುವ ಹಜಿ ಅಲಿ ದರ್ಗಾ ಟ್ರಸ್ಟ್, ನಾವು ಅಲ್ಪಸಂಖ್ಯಾತ ಟ್ರಸ್ಟ್ ಆಗಿರುವುದರಿಂದ ಇದನ್ನು ಕಾಯ್ದುಕೊಳ್ಳಲು ನಮಗೆ ಅವಕಾಶವಿದೆ ಎಂದಿದ್ದಾರೆ.
ಮುಂದಿನ ಗುರುವಾರ ಪರಿಸ್ಥಿತಿ ಸೂಕ್ಷ್ಮವಾಗುವ ಅಪಾಯವಿರುವುದರಿಂದ ಶೇಕ್ ಅವರ ಚಪ್ಪಲಿ ಹೇಳಿಕೆಯ ವಿರುದ್ಧ ಮುಂಬೈ ಪೊಲೀಸರು ಕೂಡ ಸ್ವತಂತ್ರ ತನಿಖೆ ನಡೆಸಲು ಮುಂದಾಗಿದ್ದಾರೆ.
Advertisement