ಮದ್ದೂರು ನೀರಿನ ಯೋಜನೆಗಳನ್ನು ಪೂರ್ಣಗೊಳಿಸಿ: ಸರ್ಕಾರಕ್ಕೆ ಎಸ್ಎಂ ಕೃಷ್ಣ ಪತ್ರ

ರಾಜ್ಯದಲ್ಲಿ ತೀವ್ರ ಬರಗಾಲ ಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ಮಂಡ್ಯ ಜಿಲ್ಲೆಯೂ ಹೊರತಲ್ಲ. ಅನೇಕ ಕಡೆ ನೀರಿಗಾಗಿ ಜನತೆ ಸಾಕಷ್ಟು ಪರದಾಡಬೇಕಾದ ಸ್ಥಿತಿ...
ಎಸ್.ಎಂ.ಕೃಷ್ಣ
ಎಸ್.ಎಂ.ಕೃಷ್ಣ
ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲ ಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ಮಂಡ್ಯ ಜಿಲ್ಲೆಯೂ ಹೊರತಲ್ಲ. ಅನೇಕ ಕಡೆ ನೀರಿಗಾಗಿ ಜನತೆ ಸಾಕಷ್ಟು ಪರದಾಡಬೇಕಾದ ಸ್ಥಿತಿ ಇದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಯೋಜನೆಗಳನ್ನು ಅಲ್ಲಿನ ಜನತೆಗೆ ನೀಡಿದ್ದೆ. ಆದರೆ ಇಂದು ಸರಿಯಾದ ನಿರ್ವಹಣೆ ಇಲ್ಲದೇ ನೆನಗುದಿಗೆ ಬಿದ್ದಿವೆ. ಕೂಡಲೇ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಪತ್ರ ಬರೆದಿದ್ದಾರೆ.
ನೀವು ಹಾಗೂ ಸಂಪುಟದ ಇನ್ನಿತರ ಸಹೋದ್ಯೋಗಿಗಳ ತಂಡ ಮೈಸೂರು ವಿಭಾಗದಲ್ಲಿ ಬರ ಪ್ರವಾಸ ಕೈಗೊಂಡು, ಅಲ್ಲಿನ ಪರಿಸ್ಥಿತಿ ಏನಿದೆ ಎನ್ನುವುದನ್ನು ಅರಿತಿದ್ದೀರಿ. ಹಾಗೇಯೇ ಮಂಡ್ಯದಲ್ಲಿಯೂ ಅಧ್ಯಯನ ನಡೆಸಿ ವಾಸ್ತವ ಸ್ಥಿತಿ ಏನೆನ್ನುವುದನ್ನು ಅರಿತುಕೊಂಡಿದ್ದೀರಿ. ಜಿಲ್ಲೆಯ ಹಲವು ಹಳ್ಳಿಗಳಿಗೆ ಖುದ್ದು ತೆರಳಿ ಅಲ್ಲಿನ ಜನತೆ ಕುಡಿಯುವ ನೀರಿಗಾಗಿ ಎಷ್ಟು ಕಷ್ಟ ಅನುಭವಿಸುತ್ತಿದೆ ಎನ್ನುವುದನ್ನು, ಜಾನುವಾರುಗಳು ನೀರಿಗಾಗಿ ಎಷ್ಟು ಪರದಾಡುತ್ತಿವೆ ಎನ್ನುವುದನ್ನು ಮನಗಂಡಿರುತ್ತೀರಿ. ಕಾರಣ ಕೂಡಲೇ ಕಾರ್ಯೋನ್ಮುಖರಾಗಿ ನೆನೆಗುದಿಗೆ ಬಿದ್ದಿರುವ ನೀರಿನ ಯೋಜನೆಗಳನ್ನು ತಕ್ಷಣ ಪೂರ್ಣಗೊಳಿಸಿ. ಆತಗೂರು ಹಾಗೂ ಬಾಣೋಜಿಪಂತ್ ಏತ ನೀರಾವರಿ ಯೋಜನೆಯ ಪಂಪ್​ಗಳನ್ನು ಬದಲಾಯಿಸಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಮುಂದಾಗುವಂತೆ ಮಾಜಿ ಸಿಎಂ ಮನವಿ ಮಾಡಿದ್ದಾರೆ.
ಇನ್ನು ಬನ್ನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸುವಂತೆ ಮನವಿ ಮಾಡಿರುವ ಎಸ್​ಎಂ ಕೃಷ್ಣ, ಕೂಡಲೇ ಅಲ್ಲಿನ ಅಧಿಕಾರಿಗಳ ಸಭೆ ಕರೆದು ತುರ್ತು ನಿರ್ದೇಶನವನ್ನು ನೀಡಿ ಬರಪರಿಸ್ಥಿತಿಗೆ ಸ್ಪಂದಿಸುವಂತೆ ಸೂಚಿಸಿ ಎಂದು ಕೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com