'ಕ್ಲೀನ್ ಗಂಗಾ' ಯೋಜನೆಯಲ್ಲಿ 2958 ಕೋಟಿ ನೀರುಪಾಲು? ನೀರಸ ಫಲಿತಾಂಶ; ಆರ್ ಟಿ ಐ ಪ್ರತಿಕ್ರಿಯೆ

ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆ ಗಂಗಾ ನದಿ ಸ್ವಚ್ಛತೆಗಾಗಿ ವ್ಯಯಿಸಿರುವ ಹಣದ ಬಗ್ಗೆ ವಿರೋಧ ಪಕ್ಷಗಳಷ್ಟೇ ಗರಂ ಆಗಿರುವುದಲ್ಲ. ಈಗ ಲಭ್ಯವಿರುವ ಅಂಕಿ ಅಂಶಗಳನ್ನು ಗಮನಿಸಿದರೆ,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆ ಗಂಗಾ ನದಿ ಸ್ವಚ್ಛತೆಗಾಗಿ ವ್ಯಯಿಸಿರುವ ಹಣದ ಬಗ್ಗೆ ವಿರೋಧ ಪಕ್ಷಗಳಷ್ಟೇ ಗರಂ ಆಗಿರುವುದಲ್ಲ. ಈಗ ಲಭ್ಯವಿರುವ ಅಂಕಿ ಅಂಶಗಳನ್ನು ಗಮನಿಸಿದರೆ, ಬಿಜೆಪಿ-ಎನ್ ಡಿ ಎ ಆಡಳಿತದಲ್ಲಿ ಇದಕ್ಕಾಗಿ ವಿನಿಯೋಗಿಸಿರುವ 3703 ಕೋಟಿ ರೂನಲ್ಲಿ 2958 ಕೋಟಿ ಬಳಸಿದ್ದರು, ಪವಿತ್ರ ನದಿಯ ಪರಿಸ್ಥಿತಿಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಾಗಿಲ್ಲ. 
ಲಖನೌ ನಗರದ 10 ನೇ ತರಗತಿ ಬಾಲಕಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಪ್ರಧಾನ ಮಂತ್ರಿ ಕಾರ್ಯಾಲಯ ಪ್ರತಿಕ್ರಿಯಿಸಿದ್ದು, ಜನಪ್ರಿಯ ಯೋಜನೆ 'ನಮಾಮಿ ಗಂಗೆ' ಕಳೆದ 30 ವರ್ಷಗಳ ಯೋಜನೆಗಳಿಗಿಂತ ಭಿನ್ನವೇನಲ್ಲ ಮತ್ತು ಇದು ಕಾಗದದ ಮೇಲಷ್ಟೇ ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ. 
ಈ ಆರ್ ಟಿ ಐ ಅರ್ಜಿಯಲ್ಲಿ 14 ವರ್ಷದ ಲಖನೌ ಬಾಲಕಿ ಏಳು ಪ್ರಶ್ನೆಗಳನ್ನು ಕೇಳಿದ್ದರು. ಈ ಸೂಕ್ಷ್ಮ ವಿಷಯದ ಬಗ್ಗೆ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳೆಷ್ಟು, ಇಲ್ಲಿಯವರೆಗೂ ವಿನಿಯೋಗಿಸಿರುವ ಮತ್ತು ಖರ್ಚಾದ ಮೊತ್ತ ಇತ್ಯಾದಿ. ಇದಕ್ಕೆ ಪ್ರತಿಕ್ರಿಯಿಸಲು ಪ್ರಧಾನ ಮಂತ್ರಿ ಕಾರ್ಯಾಲಯದ ಸಂಪರ್ಕಾಧಿಕಾರಿ ಕೇಂದ್ರ ನೀರು ಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾ ನವೀಕರಣ ಸಚಿವಾಲಯಗಳಿಗೆ ಸೂಚಿಸಿದ್ದರು. 
ಇದಕ್ಕೆ ಇಲಾಖೆಯ ಕೆ ಕೆ ಸಾಪ್ರಾ ಜುಲೈ 4 ರಂದು ಪ್ರತಿಕ್ರಿಯಿಸಿದ್ದು, ನೀಡಿರುವ ಉತ್ತರಗಳು ಮೋದಿ ಅವರ 'ಗಂಗಾ ಮಾಯಿ ನೇ ಬುಲಾಯಿ ಹೈ' (ಗಂಗಾ ತಾಯಿ ನನಗೆ ಕರೆ ನೀಡಿದ್ದಾಳೆ) ಎಂಬ ಘೋಷವಾಕ್ಯದಿಂದ ಪ್ರಾರಂಭವಾದ ಈ ಯೋಜನೆ ಜನರ ಭಾವನೆಗಳನ್ನು ಕೆರಳಿಸಿ ಮತಗಳನ್ನು ಪಡೆಯುವುದಕ್ಕಿಂತಲೂ ಹೆಚ್ಚಿಗೆ ಏನು ಮಾಡಿಲ್ಲ ಎಂದು ತಿಳಿಸಿದೆ. 
2014-2-15 ರಲ್ಲಿ ಗಂಗಾ ಸ್ವಚ್ಛತಾ ಅಭಿಯಾನಕ್ಕಾಗಿ 2137 ಕೋಟಿ ಅನುದಾನವನ್ನು ಘೋಷಿಸಲಾಗಿತ್ತು. ಆದರೆ ಇದರಲ್ಲಿ 84 ಕೋಟಿ ಕಡಿತಗೊಳಿಸಿ 2503 ಕೋಟಿ ಬಿಡುಗಡೆ ಮಾಡಲಾಯಿತು. ಆದರೆ ಕೇಂದ್ರ ಸರ್ಕಾರ ಈ ಅವಧಿಯಲ್ಲಿ ಕೇವಲ 326 ಕೋಟಿ ಮಾತ್ರ ವ್ಯಯಿಸಿ 1700 ಕೋಟಿಯನ್ನು ಹಾಗೆಯೇ ಉಳಿಸಿಕೊಂಡಿತು. 
2015-16 ರಲ್ಲಿ ಕೂಡ ಪರಿಸ್ಥಿತಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಈ ಅವಧಿಯಲ್ಲಿ ಈ ಅಭಿಯಾನಕ್ಕೆ ಬಜೆಟ್ ಅನ್ನು 2750 ಕೋಟಿಯಿಂದ 1650 ಕೋಟಿಗೆ ಇಳಿಸಲಾಯಿತು. ಇದರಲ್ಲಿ ಬಹುತೇಕ ಎಲ್ಲವನ್ನು ವ್ಯಯಿಸಿ ಉಳಿದಿದ್ದು 18 ಕೋಟಿ ಮಾತ್ರ. 
"ಇದು ಆಘಾತಕಾರಿ. ಗಂಗಾ ಸ್ವಚ್ಛತೆಯ ಬಗ್ಗೆ ಪ್ರಧಾನಿ ಮೋದಿ ಅವರು ಅಷ್ಟು ಗಟ್ಟಿಯಾಗಿ ಮಾತನಾಡಿದ್ದರು ಕೆಲಸವಾಗಿರುವುದು ಮಾತ್ರ ಕಡಿಮೆ" ಎನ್ನುತ್ತಾರೆ ಇದರಿಂದ ಬೇಸರಗೊಂಡಿರುವ ಆರ್ ಟಿ ಐ ಅರ್ಜಿದಾರೆ ಐಶ್ವರ್ಯ. 
2016-17 ಸಾಲಿನಲ್ಲಿ ನೀಡಲಾಗಿರುವ 2500 ಕೋಟಿ ಮೊತ್ತದ ಖರ್ಚು ವೆಚ್ಚಿನ ವಿವರ ಇನ್ನು ಲಭ್ಯವಿಲ್ಲ ಎಂದು ಪ್ರತಿಕ್ರಿಯೆ ತಿಳಿಸಿದೆ. 
ರಾಷ್ಟ್ರೀಯ ಗಂಗಾ ನದಿ ತಟದ ಪ್ರಾಧಿಕಾರ ( ಎನ್ ಜಿ ಆರ್ ಬಿ ಎ) ನಡೆಸಿರುವ ಮೂರೂ ಸಭೆಗಳ ಪ್ರಕಾರ 'ಮೋದಿ ಅಂಕಲ್' ಅವರಿಗೆ ಈ ಯೋಜನೆಯ ಬಗ್ಗೆ ಗಂಭೀರತೆಯೇ ಇಲ್ಲವೇಕೆ ಎಂದು ತಿಳಿಯಬೇಕು ಎಂದಿದ್ದಾರೆ ಐಶ್ವರ್ಯ. ಮಾರ್ಚ್ 16 2015 ರಂದು ನಡೆದ ಸಭೆಯಲ್ಲಷ್ಟೇ ಮೋದಿ ಪಾಲ್ಗೊಂಡಿದ್ದು, ಇನ್ನುಳಿದ ಅಕ್ಟೊಬರ್ 27 2014 ಮತ್ತು ಜುಲೈ 4 2016 ರ ಎರಡು ಸಭೆಗಳು ಕೇಂದ್ರ ಸಚಿವೆ ಉಮಾ ಭಾರತಿ ಅಧ್ಯಕ್ಷತೆಯಲ್ಲಿ ನಡೆದಿವೆ. 
ಇದಕ್ಕೆ ತದ್ವಿರುದ್ಧವಾಗಿ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಎನ್ ಜಿ ಆರ್ ಬಿ ಎ ನಡೆಸಿದ್ದ ಎಲ್ಲ ಸಭೆಗಳಲ್ಲಿಯೂ ಸಿಂಗ್ ಮುಂದಾಳತ್ವ ವಹಿಸಿದ್ದರು. ಈ ಸಭೆಗಳು ಅಕ್ಟೊಬರ್ 5, 2009, ನವೆಂಬರ್ 1, 2010 ಮತ್ತು ಏಪ್ರಿಲ್ 17, 2012 ರಲ್ಲಿ ಜರುಗಿದ್ದವು. 
"ಈ ನಿಟ್ಟಿನಲ್ಲಿ ಅವರು ಮೂಡಿಸಿದ್ದ ನಿರೀಕ್ಷೆಗಳ ಮೇಲೆ ಮೋದಿ ಅಂಕಲ್ ಕೆಲಸ ಮಾಡುತ್ತಾರಷ್ಟೇ ಎಂದು ನಂಬಿದ್ದೇನೆ" ಎಂದು ಸಣ್ಣ ನಗೆಯೊಂದಿಗೆ ಹೇಳುತ್ತಾರೆ ಐಶ್ವರ್ಯ. 
ಮುಂದಿನ ಐದು ವರ್ಷಗಳಲ್ಲಿ 20000 ಕೋಟಿ ವೆಚ್ಚದಲ್ಲಿ ಗಂಗಾ ಸ್ವಚ್ಛತೆಯನ್ನು ಮಾಡುವುದಾಗಿ ಭರವಸೆ ನೀಡಿದ ಮೋದಿ ಇದರಲ್ಲಿ ಯಶಸ್ವಿಯಾಗಲಿದ್ದಾರೆಯೇ ಎಂದು ಕಾಲವಷ್ಟೇ ತಿಳಿಸಬೇಕು. ಈಗ ಸದ್ಯಕ್ಕೆ "ಗಂಗಾ ತಾಯಿ ನನಗೆ ಕರೆ ನೀಡಿದ್ದಾಳೆ" ಎಂಬ ಘೋಷಣೆಯನ್ನು "ಗಂಗಾ ತಾಯಿಯನ್ನು ಮರೆಯಲಾಗಿದೆ" ಎಂಬ ಘೋಷಣೆಗೆ ಬದಲಾಯಿಸಬೇಕಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com