ಡಿಎಂಕೆ ಶಾಸಕರ ವಜಾ; ಸಭಾಪತಿ ನಿರ್ಧಾರಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
ಡಿಎಂಕೆ ಪಕ್ಷಕ್ಕೆ ಹಿನ್ನಡೆಯಾಗುವ ತೀರ್ಪಿನಲ್ಲಿ ರಾಜ್ಯ ವಿಧಾನಸಭೆಯ ಸಭಾಪತಿ ಡಿಎಂಕೆ ಪಕ್ಷದ 79 ಶಾಸಕರನ್ನು ವಜಾ ಮಾಡಿ ನೀಡಿದ್ದ ಆದೇಶಕ್ಕೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ.
ಸ್ಟಾಲಿನ್ ಅವರನ್ನು ವಿಧಾನಸಭೆಯಿಂದ ಹೊರಹಾಕುತ್ತಿರುವ ಸಂದರ್ಭ
ಚೆನ್ನೈ: ಡಿಎಂಕೆ ಪಕ್ಷಕ್ಕೆ ಹಿನ್ನಡೆಯಾಗುವ ತೀರ್ಪಿನಲ್ಲಿ ರಾಜ್ಯ ವಿಧಾನಸಭೆಯ ಸಭಾಪತಿ ಡಿಎಂಕೆ ಪಕ್ಷದ 79 ಶಾಸಕರನ್ನು ವಜಾ ಮಾಡಿ ನೀಡಿದ್ದ ಆದೇಶಕ್ಕೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ.
ಮುಖ್ಯ ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್ ಮತ್ತು ಆರ್ ಮಹಾದೇವನ್ ಅವರನ್ನು ಒಳಗೊಂಡ ಮೊದಲ ನ್ಯಾಯಪೀಠ, ಚಾಲನೆಯಲ್ಲಿರುವ ವಿಧಾನಸಭಾ ಅಧಿವೇಶನಕ್ಕೆ ಹಾಜರಾಗಲು ಡಿಎಂಕೆ ಶಾಸಕರಿಗೆ ಅವಕಾಶ ನೀಡುವ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ.
ಆದರೆ ವಿಧಾನಸಭಾ ಸ್ಪೀಕರ್ ಪಿ ಧನಪಾಲ್ ಅವರಿಗೆ ಹೈಕೋರ್ಟ್ ನೋಟಿಸ್ ನೀಡಿದೆ.
ಈ ನೋಟಿಸ್ ಸ್ವೀಕರಿಸಲು ಸ್ಪೀಕರ್ ಪರವಾಗಿ ಯಾರು ಹಾಜರಿಲ್ಲದೆ ಹೋಗಿದ್ದರಿಂದ, ಡಿಎಂಕೆ ಖಜಾಂಚಿ ಮಾತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷ ನಾಯಕ ಎಂ ಕೆ ಸ್ಟಾಲಿನ್ ಮತ್ತು ಶಾಸಕ ತ್ಯಾಗರಾಜನ್ ಅವರಿಗೆ ವೈಯಕ್ತಿಕವಾಗಿ, ಸ್ಪೀಕರ್ ಗೆ ನೋಟಿಸ್ ನೀಡಲು ಅವಕಾಶ ನೀಡಿದೆ.
ಸರ್ಕಾರ ಮತ್ತು ವಿಧಾನಸಭೆಯ ಕಾರ್ಯದರ್ಶಿಗಳಿಗೂ ನೋಟಿಸ್ ನೀಡಲಾಗಿದೆ.
ವಿಧಾನಸಭಾ ಕಲಾಪಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿ ಆಗಸ್ಟ್ 17 ರಂದು ಸ್ಪೀಕರ್ ಧನಪಾಲ್ ಅವರು 80 ಡಿಎಂಕೆ ಶಾಸಕರನ್ನು ಒಂದು ವಾರದ ಕಾಲ ವಜಾ ಮಾಡಿದ್ದರು. ನಂತರ ಒಬ್ಬ ಶಾಸಕರು ವಿಧಾನಸಭೆಯಲ್ಲಿ ಹಾಜರಿರದಿದ್ದರಿಂದ ಅವರಿಗೆ ವಜಾ ಆದೇಶವನ್ನು ತೆಗೆದುಹಾಕಲಾಗಿತ್ತು.
ಆಡಳಿತ ಪಕ್ಷ ಎಐಡಿಎಂಕೆ ಶಾಸಕರೊಬ್ಬರು ಸ್ಟಾಲಿನ್ ಬಗ್ಗೆ ನೀಡಿದ ಹೇಳಿಕೆಯಿಂದಾಗ ಕುಪಿತಗೊಂಡಿದ್ದ ಡಿ ಎಂ ಕೆ ಶಾಸಕರು ವಿಧಾನಸಭಾ ಕಲಾಪಕ್ಕೆ ಅಡ್ಡಿಪಡಿಸಿದ್ದರು. ಸ್ಪೀಕರ್ ಆದೇಶ ಕಾನೂನು ಬಾಹಿರ ಎಂದು ಡಿಎಂಕೆ ಹೈಕೋರ್ಟ್ ಮೊರೆ ಹೋಗಿತ್ತು.