ರೋಹಿತ್ ದಲಿತನಾಗಿರಲಿಲ್ಲ ಎಂಬ ಸಮಿತಿ ವರದಿ ಸಂಪೂರ್ಣ ತಪ್ಪು: ಪುನಿಯಾ

ರೋಹಿತ್ ವೇಮುಲಾ ಪರಿಶಿಷ್ಟ ಜಾತಿಗೆ ಸೇರಿರಲಿಲ್ಲ ಎಂಬ ರೂಪನ್ವಾಲ್ ಸಮಿತಿಯ ವರದಿ ಸಂಪೂರ್ಣ ತಪ್ಪು ಎಂದಿರುವ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ (ಎನ್ ಸಿ ಎಸ್ ಸಿ) ಅಧ್ಯಕ್ಷ ಪಿ ಎಲ್ ಪುನಿಯಾ
ರೋಹಿತ್ ವೇಮುಲಾ
ರೋಹಿತ್ ವೇಮುಲಾ
ಬಾರಾಬಂಕಿ: ರೋಹಿತ್ ವೇಮುಲಾ ಪರಿಶಿಷ್ಟ ಜಾತಿಗೆ ಸೇರಿರಲಿಲ್ಲ ಎಂಬ ರೂಪನ್ವಾಲ್ ಸಮಿತಿಯ ವರದಿ ಸಂಪೂರ್ಣ ತಪ್ಪು ಎಂದಿರುವ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ (ಎನ್ ಸಿ ಎಸ್ ಸಿ) ಅಧ್ಯಕ್ಷ ಪಿ ಎಲ್ ಪುನಿಯಾ ವರದಿಯನ್ನು ತಿರಸ್ಕರಿಸಿದ್ದಾರೆ. 
ಜಿಲ್ಲಾ ಕಲೆಕ್ಟರ್ ಮತ್ತು ಶಾಸನ ಸಮಿತಿ ಎರಡು ಪ್ರತ್ಯೇಕ ವರದಿಗಳಲ್ಲಿ ರೋಹಿತ್ ಇತರ ಹಿಂದುಳಿಗ ವರ್ಗಕ್ಕೆ ಸೇರಿರಲಿಲ್ಲ ಬದಲಾಗಿ ದಲಿತ ಸಮುದಾಯಕ್ಕೆ ಸೇರಿದ್ದರು ಎಂದು ಈಗಾಗಲೇ ತಿಳಿಸಿವೆ ಎಂದು ಎನ್ ಸಿ ಎಸ್ ಸಿ ಅಧ್ಯಕ್ಷ ಹೇಳಿದ್ದಾರೆ. 
"ಕಾಂಗ್ರೆಸ್ ಈ ವಿಷಯ ಎತ್ತಿದಾಗ ಕಡೆಗಣಿಸಿ ಈಗ ರೋಹಿತ್ ದಲಿತನಾಗಿರಲಿಲ್ಲ ಎಂಬ ವರದಿ ಸಲ್ಲಿಸಲಾಗುತ್ತಿದೆ" ಎಂದು ಪುನಿಯಾ ನೆನ್ನೆ ವರದಿಗಾರರಿಗೆ ಹೇಳಿದ್ದಾರೆ. 
ಮೊದಲನೇ ದಿನದಿಂದಲೂ ವೇಮುಲಾ ದಲಿತನಾಗಿರಲಿಲ್ಲ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವನಾಗಿದ್ದರು ಎಂದು ಬಿಜೆಪಿ ಪುನರುಚ್ಛಿಸುತ್ತಿದ್ದು ಈಗ ಅದನ್ನು ಸಮರ್ಥಿಸಿಕೊಳ್ಳಲೆಂದೇ ಈ ಸಮಿತಿ ರಚಿಸಲಾಗಿತ್ತು ಎಂದು ಕಾಂಗ್ರೆಸ್ ಸಂಸದ ಆರೋಪಿಸಿದ್ದಾರೆ. 
ಹೈದರಾಬಾದ್ ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ವೇಮುಲಾ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣ ದೇಶದಾದ್ಯಂತ ತೀವ್ರ ಪ್ರತಿಭಟನೆಗೆ ಎಡೆ ಮಾಡಿಕೊಟ್ಟಿತ್ತು ಮತ್ತು ಅಂದಿನ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಇದಕ್ಕೆ ಕಾರಣ ಎಂದು ದೂರಿ ರಾಜಿನಾಮೆಗೆ ಆಗ್ರಹಿಸಲಾಗಿತ್ತು. 
ಆತ್ಮಹತ್ಯೆಗೆ ಕಾರಣಗಳನ್ನು-ಪರಿಸ್ಥಿತಿಯನ್ನು ಕಂಡುಹಿಡಿಯಯಲು ಮಾನವ ಸಂಪನ್ಮೂಲಗಳ ಸಚಿವಾಲಯ ನಿವೃತ್ತ ನ್ಯಾಯಾಧೀಶ ಎ ಕೆ ರೂಪನ್ವಾಲ್ ಆಯೋಗವನ್ನು ರಚಿಸಿತ್ತು.
"26 ವರ್ಷದ ದಲಿತ ಸಂಶೋಧಕರ ಆತ್ಮಹತ್ಯೆಗೆ ಕಾರಣಗಳನ್ನು ಹುಡುಕಲು ಆಯೋಗಕ್ಕೆ ತಿಳಿಸಲಾಗಿತ್ತು ಆದರೆ ಅದು ಬಿಟ್ಟು ಆಯೋಗ ರೋಹಿತ್ ಅವರ ಜಾತಿ ಸಂಶೋಧನೆಗೆ ಹೊರಟಿದ್ದು ದುರದೃಷ್ಟಕರ" ಎಂದಿರುವ ಪುನಿಯಾ "ಅವರು ಕಂಡು ಹಿಡಿರುವುದು ತಪ್ಪು ಮತ್ತು ಕಲ್ಪನೆ" ಎಂದು ಕೂಡ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com