ವಿಜಯವಾಡ: ಕಂಚಿ ಕಾಮಕೋಟಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಅವರು ಮಂಗಳವಾರ ಪೂಜೆ ಮಾಡುತ್ತಿದ್ದ ವೇಳೆಯೇ ಪ್ರಜ್ಞೆ ತಪ್ಪಿದ್ದು, ಕೂಡಲೇ ಅವರನ್ನು ವಿಜಯವಾಡದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂಚಿ ಶ್ರೀಗಳನ್ನು ಇಲ್ಲಿನ ಆಂಧ್ರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚತುರ್ಮಾಸ ದೀಕ್ಷ ಹಿನ್ನೆಲೆಯಲ್ಲಿ ನಿತ್ಯ ಯಾವುದೇ ಆಹಾರ ಸೇವಿಸದೆ ಕೃಷ್ಣ ನದಿಯಲ್ಲಿ ಸ್ನಾನ ಮಾಡಿ ಪೂಜೆ ಮಾಡುತ್ತಾರೆ. ಇದರಿಂದ ಅವರ ರಕ್ತದೊತ್ತಡ ಹಾಗೂ ಸಕ್ಕರೆ ಪ್ರಮಾಣ ಕಡಿಮೆಯಾಗಿದ್ದರಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಜಯೇಂದ್ರ ಸರಸ್ವತಿ ಸ್ವಾಮೀಜಿ ಅವರು ಈ ಇಳಿ ವಯಸ್ಸಿನಲ್ಲಿ ಈ ರೀತಿಯ ಉಪವಾಸ ಮಾಡಿದ್ದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಶ್ರೀಗಳಿಗೆ ಕೃತಕ ಉಸಿರಾಟ ಅಳವಡಿಸಲಾಗಿದೆ ಎನ್ನಲಾಗಿದೆ.
ಈ ಮಧ್ಯೆ ಕಂಚಿ ಶ್ರೀಗಳಿಗೆ ಯಾವುದೇ ಅಪಾಯ ಇಲ್ಲ. ಅವರ ಆರೋಗ್ಯ ಸ್ಥಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನಿಂದ ಕೆಲವು ವೈದ್ಯರನ್ನು ಕರೆಸಿಕೊಳ್ಳಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರೊಬ್ಬರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.