ಪಣಜಿ: ನೆನ್ನೆಯಷ್ಟೇ ಆರ್ ಎಸ್ ಎಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಸುಭಾಷ್ ವೆಲಿಂಗ್ಕರ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಇರಾದೆ ಇಲ್ಲ ಎಂದು ಇಂದು ರಾಜೀನಾಮೆ ನೀಡಿರುವ ಆರ್ ಎಸ್ ಎಸ್ ಸದಸ್ಯರೊಬ್ಬರು ಹೇಳಿದ್ದಾರೆ.
ಪಣಜಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ, ಈಗ ಮಾಜಿಯಾಗಿರುವ ಉತ್ತರ ಗೋವಾ ಜಿಲ್ಲೆಯ ಆರ್ ಎಸ್ ಎಸ್ ಅಧ್ಯಕ್ಷ ಕೃಷ್ಣರಾಜ್ ಸುಕೇರ್ಕರ್, ಇದೆ ಮೊದಲ ಬಾರಿಗೆ ದೇಶದಲ್ಲಿ ಆರ್ ಎಸ್ ಎಸ್ ರಾಷ್ಟ್ರೀಯ ಮುಖಂಡರ ವಿರುದ್ಧ ರಾಜ್ಯದ ಸದಸ್ಯರೆಲ್ಲರೂ ಈ ರೀತಿಯ ಪ್ರತಿಭಟನೆ ನಡೆಸಿರುವುದು ಎಂದಿದ್ದಾರೆ.
"ಒಂದು ಸಂಗತಿಯಂತೂ ಸ್ಪಷ್ಟ ಅದೇನೆಂದರೆ ವೆಲಿಂಗ್ಕರ್ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ" ಎಂದು ಸುಕೇರ್ಕರ್ ಹೇಳಿದ್ದು, ಆರ್ ಎಸ್ ಎಸ್ ರಾಷ್ಟ್ರೀಯ ನಾಯಕತ್ವಕ್ಕೆ ವೆಲಿಂಗ್ಕರ್ ಅವರ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದಿದ್ದಾರೆ.
ನೆನ್ನೆ ವೆಲಿಂಗ್ಕರ್ ಅವರನ್ನು ಗೋವಾ ಆರ್ ಎಸ್ ಎಸ್ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದ ಹಿನ್ನಲೆಯಲ್ಲಿ ಇಂದು 400 ಕ್ಕೂ ಹೆಚ್ಚು ಆರ್ ಎಸ್ ಎಸ್ ಕಾರ್ಯಕರ್ತರು ರಾಜ್ಯ ಬಿಜೆಪಿ ಹಾಗು ಭದ್ರತಾ ಸಚಿವ ಮನೋಹರ್ ಪರ್ರಿಕರ್ ವಿರುದ್ಧ ಸಿಡಿದೆದ್ದು, ರಾಜೀನಾಮೆ ನೀಡಿದ್ದರು. ವೆಲಿಂಗ್ಕರ್ ಅವರನ್ನು ವಜಾ ಮಾಡಲು ಇವರೇ ಕಾರಾಣ ಎಂದು ಕೂಡ ದೂರಿದ್ದರು.
ವೆಲಿಂಗ್ಕರ್ ಅವರನ್ನು ಗೋವಾದಲ್ಲಿ ಹಿರಿಯ ಆರ್ ಎಸ್ ಎಸ್ ಮುಖಂಡ ಎಂದು ಪರಿಗಣಿಸಲಾಗುತ್ತದೆ ಮತ್ತು ಹಲವಾರು ಬಿಜೆಪಿ ನಾಯಕರನ್ನು ಹೊರಹೊಮ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಭದ್ರತಾ ಸಚಿವ ಪರ್ರಿಕರ್ ಮತ್ತು ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೆಕರ್ ಅವರು ವೆಲಿಂಗ್ಕರ್ ಗರಡಿಯಲ್ಲೇ ಪಳಗಿದವರು ಎನ್ನಲಾಗುತ್ತದೆ.