ಶಿಕ್ಷಣದಲ್ಲಿ ಸಮಾನತೆ ತರಲು ಐದು ಅಂಶಗಳನ್ನು ಪ್ರಸ್ತಾಪಿಸಿದ ಬರಗೂರು ರಾಮಚಂದ್ರಪ್ಪ

ಶಿಕ್ಷಣದಲ್ಲಿನ ಅಸಮಾನತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷ ....
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ
ರಾಯಚೂರು(ಶಾಂತರಸ ಪ್ರಧಾನ ವೇದಿಕೆ): ಶಿಕ್ಷಣದಲ್ಲಿನ ಅಸಮಾನತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ ಅವರು, ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಸಮಾನ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಶುಕ್ರವಾರ ಹೇಳಿದ್ದಾರೆ.
ಇಂದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ.ಬರಗೂರು ರಾಮಚಂದ್ರಪ್ಪ ಅವರು, ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಸಮಾನ ಶಿಕ್ಷಣಕ್ಕೆ ಒತ್ತು ನೀಡದ ಹೊರತು ಶಿಕ್ಷಣದ ಅಸಮಾನತೆ ತೊಲಗುವುದಿಲ್ಲ ಎಂದು ಹೇಳಿದ್ದಾರೆ.
ಇವತ್ತಿನ ಶಿಕ್ಷಣ ಪದ್ಧತಿಯ ಪ್ರಕಾರ ಅಂಗನವಾಡಿಯಿಂದಲೇ ಅಸಮಾನತೆ ಆರಂಭವಾಗುತ್ತದೆ. ಒಂದೇ ವಯಸ್ಸಿನ  ಹಸುಗೂಸುಗಳಲ್ಲಿ ಬಡಮಕ್ಕಳು ಅಂಗನವಾಡಿಗೆ ಬರುತ್ತಾರೆ; ಇತರರು ಎಲ್.ಕೆ.ಜಿ, ಯು.ಕೆ.ಜಿ.ಗಳಿಗೆ  ಹೋಗುತ್ತಾರೆ. ಹಸುಗೂಸುಗಳ ಮನಸ್ಸಿನಲ್ಲಿಯೇ ಕೀಳರಿಮೆ ಮತ್ತು ಮೇಲರಿಮೆಗಳ ಕಳೆಯನ್ನು ಬೆಳೆಯುವ ಈ ಪದ್ಧತಿ ಅಮಾನವೀಯವಾದುದು. ಇನ್ನು ಪ್ರಾಥಮಿಕ ಶಾಲೆಗೆ ಬಂದರೂ ಇದೇ  ಪರಿಪಾಠ. ಬಡವರಿಗೊಂದು ಬಲ್ಲಿದರಿಗೊಂದು ಎಂಬಂತೆ ಸರ್ಕಾರಿ ಶಾಲೆ-ಖಾಸಗಿ ಶಾಲೆ, ಕನ್ನಡ ಅಥವಾ ಮಾತೃಭಾಷಾ ಮಾಧ್ಯಮ- ಆಂಗ್ಲಭಾಷಾ ಮಾಧ್ಯಮ ಎಂದು ವಿಂಗಡಿಸಿದ ಶಿಕ್ಷಣವಿಧಾನ. ಪ್ರೌಢಶಾಲೆಗೆ ಬಂದರೂ ಇದೇ ಹಾದಿ. ಜೊತೆಗೆ ಮಾದರಿಶಾಲೆಗಳೆಂಬ ಪ್ರತ್ಯೇಕ ವ್ಯವಸ್ಥೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಾರೆ ಹೇಳುವುದಾದರೆ ಒಡಲೊಳಗೆ ಅಸಮಾನತೆಯ ಆಯಾಮವನ್ನು ಇಟ್ಟುಕೊಂಡು ಹಸುಗೂಸುಗಳಲ್ಲಿ ವ್ಯತ್ಯಾಸ ಮಾಡುವ ಅವೈಜ್ಞಾನಿಕ ಪದ್ಧತಿಯನ್ನು ರದ್ದುಮಾಡಿ ಮೂಲಭೂತ ಬದಲಾವಣೆಗಳನ್ನು ತರಬೇಕು. ಸಮಾನ ಶಿಕ್ಷಣ ನೀತಿಗಾಗಿ ಒಂದು ಆಂದೋಲನವೇ ನಡೆಯಬೇಕು. ಶಿಕ್ಷಕರು, ವಿದ್ಯಾರ್ಥಿಗಳು ಸಾಹಿತಿಗಳು, ಸಾಮಾಜಿಕ ಚಿಂತಕರು, ವಿವಿಧ ಸಂಘಟನೆಗಳ ಚಳವಳಿಗಾರರು ಒಂದಾಗಿ ಈ ಚಳವಳಿಯನ್ನು ಮುನ್ನಡೆಸಬೇಕು ಸಾಹಿತ್ಯ ಪರಿಷತ್ತು ಪ್ರೇರಕ ಶಕ್ತಿಯಾಗಬೇಕು. ಈ ದಿಕ್ಕಿನಲ್ಲಿ ಮುಂದಿನ ಅಂಶಗಳನ್ನು ಗಮನಿಸಬೇಕು ಎಂದರು.
ಶಿಕ್ಷಣದ ಅಸಮಾನತೆ ನಿವಾರಣೆಗೆ ಬರಗೂರು ಅವರು ಐದು ಅಂಶಗಳ ಪಟ್ಟಿಯನ್ನು ಸರ್ಕಾರದ ಮುಂದಿಟ್ಟು, ವಿವಿಧ ಮಾದರಿ ಶಾಲೆಗಳನ್ನು ಬಿಡಿ ಬಿಡಿಯಾಗಿ ಸ್ಥಾಪಿಸಿ ಮಕ್ಕಳಲ್ಲಿ ತಾರತಮ್ಯ ಮಾಡುವ ಬದಲು ಪ್ರತಿ ಗ್ರಾಮಪಂಚಾಯಿತಿಗೊಂದು ಸುಸಜ್ಜಿತ ಹಾಗೂ ಸಮಸ್ತ ಸೌಲಭ್ಯಗಳುಳ್ಳ ಏಕರೂಪದ ಮಾದರಿ ಶಾಲೆಯನ್ನು ಸ್ಥಾಪಿಸಬೇಕು. ಕನ್ನಡವನ್ನೂ ಒಳಗೊಂಡಂತೆ ಮಾತೃಭಾಷಾ ಶಾಲೆಗಳಲ್ಲಿ ಇಂಗ್ಲಿಷ್ ಒಂದನೇ ತರಗತಿಯಿಂದಲೇ ಒಂದು ಕಡ್ಡಾಯ ವಿಷಯವಾಗಬೇಕು, ಎಲ್.ಕೆ.ಜಿ. ಯು.ಕೆ.ಜಿ.ಯಂತೆ ಪ್ರಾಥಮಿಕ ಪೂರ್ವ ಶಾಲೆಗಳನ್ನು ಆರಂಭಿಸಿಬೇಕು. ಮಾತೃಭಾಷೆ ಅಥವಾ ರಾಜ್ಯ ಭಾಷಾ ಶಿಕ್ಷಣ ಮಾಧ್ಯಮವನ್ನು ಜಾರಿಗೆ ತರಲು ಸಂವಿಧಾನ ತಿದ್ದುಪಡಿಗೆ ಒತ್ತಾಯ ಮತ್ತು ಹೋರಾಟಕ್ಕೆ ಅಣಿಯಾಗಬೇಕು. ಶಾಲೆಗಳಲ್ಲಿ ಕಲಿಸುವ ವ್ಯಾಕರಣದ ಬಗ್ಗೆ ಮರುಚಿಂತನೆ ನಡೆದು ‘ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣ ಎಂಬ ಪರಿಕಲ್ಪನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ನಮ್ಮ ನಾಡಿಗೆ ಬೇಕಿರುವುದು ಸಾಮಾಜಿಕ ನ್ಯಾಯದ ರಾಜ್ಯ, ಪ್ರತ್ಯೇಕ ರಾಜ್ಯ ಅಲ್ಲ. ಪ್ರತ್ಯೇಕ ರಾಜ್ಯದ ಬೇಡಿಕೆ ಇಡುತ್ತಿರುವವರು ಪ್ರತ್ಯೇಕತೆಯೊಂದೇ ಪರಿಹಾರವೇ? ಎಂಬ ಪ್ರಶ್ನೆ ಕೇಳಿಕೊಳ್ಳಬೇಕು. ಸಾಮಾಜಿಕ, ಆರ್ಥಿಕ ಸಮಾನತೆಯಡಿ ಸಮತೋಲನದ ಅಭಿವೃದ್ಧಿ ಇಲ್ಲದಿದ್ದರೆ ಕರ್ನಾಟಕದಲ್ಲಿ ಒಡಕು ಹುಟ್ಟುತ್ತದೆ. ಭಾಷೆ ಮತ್ತು ಭೂಗೋಳದ ಸಂಬಂಧವಷ್ಟೇ ಕನ್ನಡಾಭಿಮಾನ ಅಲ್ಲ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com