ಯೋಗ ಗುರು ರಾಮದೇವ್
ಪ್ರಧಾನ ಸುದ್ದಿ
ತಮ್ಮ ಸೋದರಸೊಸೆ ಮತ್ತು ಲಾಲು ಪುತ್ರನ ಮದುವೆ ವದಂತಿ ಅಲ್ಲಗೆಳೆದ ಬಾಬಾ ರಾಮದೇವ್
ಯೋಗ ಗುರು ರಾಮದೇವ್ ತಮ್ಮ ಸೋದರಸೊಸೆಯನ್ನು ಆರ್ ಜೆ ಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ಮತ್ತು ಬಿಹಾರ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಅವರಿಗೆ ಮದುವೆ
ಪಾಟ್ನಾ: ಯೋಗ ಗುರು ರಾಮದೇವ್ ತಮ್ಮ ಸೋದರಸೊಸೆಯನ್ನು ಆರ್ ಜೆ ಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ಮತ್ತು ಬಿಹಾರ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಅವರಿಗೆ ಮದುವೆ ಮಾಡಿಕೊಡಲು ಉತ್ಸುಕರಾಗಿದ್ದಾರೆ ಎಂಬ ವದಂತಿಗಳನ್ನು ಅಲ್ಲಗೆಳೆದಿದ್ದಾರೆ.
"ಮಾಧ್ಯಮದ ಒಂದು ವರ್ಗ ಈ ವದಂತಿಗಳನ್ನು ಹಬ್ಬಿಸುತ್ತಿದೆ ಅಷ್ಟೇ, ಅದರಲ್ಲಿ ಸತ್ಯವಿಲ್ಲ" ಎಂದು ರಾಮದೇವ್, ಲಾಲು ಅವರ ಅಧಿಕೃತ ಗೃಹದಲ್ಲಿ ಭೇಟಿ ಮಾಡಿದ ನಂತರ ವರದಿಗಾರರಿಗೆ ತಿಳಿಸಿದ್ದಾರೆ.
ಪತಂಜಲಿ ಉತ್ಪನ್ನಗಳ ವಿತರಕರು ಮತ್ತು ಮಾರಾಟಗಾರರನ್ನು ಭೇಟಿ ಮಾಡಿ ಅವರ ಜೊತೆಗೆ ಚರ್ಚೆ ಮಾಡಲು ಗುರುವಾರ ಬಂದಿಳಿದಿದ್ದ ರಾಮದೇವ್ ರಾಷ್ಟ್ರೀಯ ಜನತಾ ದಳದ ಅಧ್ಯಕ್ಷರಿಗೆ ಆರೋಗ್ಯ ಸರಿಯಿಲ್ಲ ಎಂದು ತಿಳಿದು ಅವರನ್ನು ಭೇಟಿ ಮಾಡಿದ್ದರು.
"ಯಾವುದೇ ಮದುವೆ ಸಂಬಂಧಕ್ಕಾಗಲಿ ಅಥವಾ ನೋಟು ಹಿಂಪಡೆತದ ರಾಜಕೀಯದ ಬಗ್ಗೆ ಚರ್ಚಿಸುವುದಕ್ಕಾಗಲಿ ನಾನು ಲಾಲು ಅವರನ್ನು ಭೇಟಿ ಮಾಡಿಲ್ಲ. ಅವರ ಆರೋಗ್ಯ ವಿಚಾರಿಸಲು ಖುದ್ದಾಗಿ ಭೇಟಿ ಮಾಡಿದೆ" ಎಂದು ರಾಮದೇವ್ ಸ್ಪಷ್ಟಪಡಿಸಿದ್ದಾರೆ.
"ಲಾಲು ನಮ್ಮ ದೇಶದ ಸಂಪತ್ತು ಮತ್ತು ಅವರ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ. ಈ ದೇಶದ ರಾಜಕೀಯಕ್ಕಾಗಿ ಲಾಲು ಆರೋಗ್ಯವಾಗಿರಬೇಕು" ಎಂದು ಹೇಳಿರುವ ರಾಮದೇವ್ ಲಾಲು ಯೋಗ ಕೂಡ ಮಾಡುತ್ತಾರೆ ಎಂದು ಕೂಡ ತಿಳಿಸಿದ್ದಾರೆ.

