ಪೋಯಸ್ ಗಾರ್ಡನ್ ನಿವಾಸದ ಬಳಿ ಎಐಎಡಿಎಂಕೆ ಕಾರ್ಯಕರ್ತರೊಬ್ಬರು ಶಶಿಕಲಾ ಅವರ ಫೋಟೋ ಪ್ರದರ್ಶಿಸಿದ್ದು ಹೀಗೆ.
ಪ್ರಧಾನ ಸುದ್ದಿ
ಶಶಿಕಲಾ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆ ಒಪ್ಪಿಕೊಂಡಿದ್ದಾರೆ: ತಮಿಳುನಾಡು ಸಿಎಂ
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಅವರು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ....
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಅವರು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಅವರು ಗುರುವಾರ ಹೇಳಿದ್ದಾರೆ.
ಇಂದು ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಶಶಿಕಲಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ ಕೆಲವು ಗಂಟೆಗಳ ನಂತರ ಸಭೆಯಲ್ಲಿ ಪಕ್ಷ ಪಾಸ್ ಮಾಡಿದ ನಿಲುವಳಿ ಪ್ರತಿಯನ್ನು ಪನ್ನೀರ್ ಸೆಲ್ವಂ ಅವರು ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸಕ್ಕೆ ತೆರಳಿ ಶಶಿಕಲಾ ಅವರಿಗೆ ನೀಡಿದರು. ಬಳಿಕ ಮಾತನಾಡಿದ ಸಿಎಂ, ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ವಹಿಸಿಕೊಳ್ಳಲು ಶಶಿಕಲಾ ಒಪ್ಪಿಕೊಂಡಿದ್ದಾರೆ ಎಂದರು.
ಜಯಲಲಿತಾ ಅವರ ನಿಧನದ ನಂತರ ತೆರವಾಗಿದ್ದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ, ಅವರ ಆಪ್ತೆಯಾಗಿದ್ದ ಶಸಿಕಲಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದೆ ಮೊದಲ ಬಾರಿಗೆ ಚುನಾವಣೆ ಇಲ್ಲದೆ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗಿದೆ.
ಎಂಜಿಆರ್ ನಿಧನದ ನಂತರ ಜಯಲಲಿತಾ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಈಗ ಜಯಲಲಿತಾ ಅವರ ಎಲ್ಲಾ ಜವಾಬ್ದಾರಿಗಳನ್ನು ಚಿನ್ನಮ್ಮ ಶಸಿಕಲಾ ನಿರ್ವಹಿಸುತ್ತಾರೆ ಎಂದು ನಿಲುವಳಿಯಲ್ಲಿ ತಿಳಿಸಲಾಗಿದೆ.

