ಪ್ರತಿಭಟನೆಗೆ ಸೇರಿದ ಜೆ ಎನ್ ಯು ಪ್ರಾಧ್ಯಾಪಕರು; ಆವರಣದಲ್ಲಿ ರಾಷ್ಟ್ರಭಕ್ತಿಯ ಪಾಠ
ನವದೆಹಲಿ: ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ ನ ಅಧ್ಯಕ್ಷ ಕನ್ಹಯಾ ಕುಮಾರ್ ಅವರನ್ನು ರಾಷ್ಟ್ರದ್ರೋಹದ ಆರೋಪದಡಿ ಬಂಧಿಸಿರುವ ದೆಹಲಿ ಪೊಲೀಸರ ಕ್ರಮವನ್ನು ವಿರೋಧಿಸಿ, ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿ ಸಮುದಾಯವನ್ನು ಸೇರಿರುವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಅಲ್ಲೇ ಹುಲ್ಲುಗಾವಲಿನ ಮೇಲೆ 'ರಾಷ್ಟ್ರಭಕ್ತಿ'ಯ ಪಾಠ ಮಾಡುವುದಾಗಿ ಹೇಳಿದ್ದಾರೆ.
ಬೇಷರತ್ತಾಗಿ ಕನ್ಹಯಾ ಕುಮಾರ್ ವಿರುದ್ಧದ ಎಲ್ಲ ಆರೋಪಗಳನ್ನು ವಜಾ ಮಾಡುವವರೆಗೆ ಅನಿರ್ಧಿಷ್ಟ ಕಾಲದವರೆಗೆ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ನೆನ್ನೆ ಘೋಷಿಸಿದ್ದರು. ಹಾಗೆಯೇ ನೆನ್ನೆ ಪಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ಕನ್ಹಯ ವಿಚಾರಣೆ ವೇಳೆ ಹಾಜರಿದ್ದ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳ ಮೇಲೆ ಕೆಲವು ವಕೀಲರು ದಾಳಿ ನಡೆಸಿರುವ ಹಿನ್ನಲೆಯಲ್ಲಿ, ಅಧ್ಯಾಪಕರ ಸಂಘ ಕೂಡ ಪ್ರತಿಭಟನೆಗೆ ಇಳಿದಿದೆ.
"ಆಡಳಿತ ಮಂಡಳಿ ವಿದ್ಯಾರ್ಥಿಗಳ ವಿರುದ್ಧವಷ್ಟೇ ಪಿತೂರಿ ನಡೆಸುತ್ತಿಲ್ಲ ನಮ್ಮ ವಿರುದ್ಧವೂ ದಾಳಿ ನಡೆಸಿದೆ. ಇದರ ಬಗ್ಗೆ ಉಪಕುಲಪತಿ ತುಟಿ ಬಿಚ್ಚುತ್ತಿಲ್ಲ. ಅಧಿಕಾರದಲ್ಲಿರುವ ಕೆಲವರ ಪಿತೂರಿಯಿಂದ ಜೆ ಎನ್ ಯು ರಾಷ್ಟ್ರದ್ರೋಹಿ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ರಾಷ್ಟ್ರಭಕ್ತಿ ಏನೆಂದು ಪಾಠ ಮಾಡಲು ಇದು ಸೂಕ್ತ ಸಮಯ" ಎಂದು ನೆನ್ನೆ ದಾಳಿಗೆ ಒಳಗಾದ ಪ್ರಾಧ್ಯಾಪಕ ರೋಹಿತ್ ಆಜಾದ್ ಹೇಳಿದ್ದಾರೆ.
ಆಡಳಿತ ಮಂಡಲಿಯ ಕಟ್ಟಡದ ಎದುರು ಒಂದೂವರೆ ಘಂಟೆಯ ಸಮಯ ರಾಷ್ಟ್ರಭಕ್ತಿ ಬಗೆಗೆ ಪಾಠ ಹೇಳಲಾಗುವುದು ಎಂದು ಕೂಡ ರೋಹಿತ್ ಆಜಾದ್ ತಿಳಿಸಿದ್ದಾರೆ.
ಪುಣೆ ಮೂಲದ ಎಫ್ ಟಿ ಐ ಐ ಸೇರಿದಂತೆ ೪೦ ಕೇಂದ್ರ ವಿಶ್ವವಿದ್ಯಾಲಯದ ಅಧ್ಯಾಪಕ ಸಂಘಗಳು ಕನ್ಹಯ ಅವರ ಬಂದನ ವಿರುದ್ಧ ಹೇಳಿಕೆ ನೀಡಿದ್ದು ಇದು ಅಶಿಸ್ತು ಅಷ್ಟೇ ರಾಷ್ಟ್ರದ್ರೋಹವಲ್ಲ ಎಂದಿವೆ.
ವಿಶ್ವದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಈ ಘಟನೆಯನ್ನು ಖಂಡಿಸಿದ್ದು, ಕೇಂದ್ರ ಸರ್ಕಾರ ಮತ್ತು ಪೊಲೀಸರ ಈ ಕ್ರಮ ನ್ಯಾಯಬದ್ಧವಾದುದಲ್ಲ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ