ಹಿಂದೂಸ್ತಾನ ಖಂಡಿತವಾಗಿಯೂ ಸ್ವತಂತ್ರವಾಗುತ್ತದೆ: ಬೋಸ್ ಕೊನೆಯ ನುಡಿ

ನನ್ನ ತಾಯ್ನಾಡಿಗೆ ಮರಳಿದಾಗ ಅಲ್ಲಿರುವ ಸಹೋದರ ಸಹೋದರಿಯರಲ್ಲಿ, ನಾನು ನನ್ನ ಕೊನೆಯುಸಿರಿನವರೆಗೂ ದೇಶಕ್ಕಾಗಿ ಹೋರಾಡಿದ್ದೆ ಎಂದು ಹೇಳು...
ಸುಭಾಶ್‌ ಚಂದ್ರ ಬೋಸ್
ಸುಭಾಶ್‌ ಚಂದ್ರ ಬೋಸ್
ಲಂಡನ್: ಸುಭಾಶ್‌ ಚಂದ್ರ ಬೋಸ್ ಸಂಚರಿಸುತ್ತಿದ್ದ ವಿಮಾನದಲ್ಲಿ ಇದ್ದಕ್ಕಿದ್ದಂತೆ ಭಾರೀ ಸದ್ದಾಯಿತು. ವಿಮಾನ ಮೆಲ್ಲನೆ ಇಳಿದಿತ್ತು. ನೇತಾಜಿಯವರು ನನ್ನತ್ತ ತಿರುಗಿ ನೋಡಿದರು.  ಮುಂದಿನ ಬಾಗಿಲಿನಿಂದ ಹೋಗಿ, ಹಿಂದೆ ಬೇರೆ ದಾರಿಯಿಲ್ಲ ಎಂದೆ. ವಿಮಾನ ಬೆಂಕಿಯುಗುಳುತ್ತಿತ್ತು. ಹೊರಗೆ ಬರಲು ಮುಂದಿನ ಬಾಗಿಲು ಬಳಿ ಹೋದರೆ ಅಲ್ಲಿಂದಲೂ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಅವರು ಬೆಂಕಿಯುಗುಳುತ್ತಿದ್ದ ಬಾಗಿಲಿಂದ ಹೊರ ಜಿಗಿದರು. ನಾನು ಅವರನ್ನು ಹಿಂಬಾಲಿಸಿದೆ.
ನಾನು ಹೊರಗೆ ಜಿಗಿದಾಗ ಅವರು 10 ಅಡಿ ದೂರದಲ್ಲಿದ್ದರು. ಅವರ ಬಟ್ಟೆ ಬೆಂಕಿಗಾಹುತಿಯಾಗಿತ್ತು. ಅವರ ಹತ್ತಿರ ಓಡಿ ಹೋಗಿ ಕಷ್ಟಪಟ್ಟು ಅವರು ಧರಿಸಿದ್ದ ಬುಷ್ ಶಟ್ ಬೆಲ್ಟ್ ಬಿಚ್ಚಿದೆ. ಅವರು ಧರಿಸಿದ್ದ ಪ್ಯಾಂಟ್ ನಲ್ಲಿ ಅಷ್ಟು ಬೆಂಕಿ ಇಲ್ಲದಿರುವ ಕಾರಣ ಅದನ್ನು ಬಿಚ್ಚಲಿಲ್ಲ.
ನಾನು ಉಣ್ಣೆ ಬಟ್ಟೆಯ ಯುನಿಫಾರ್ಮ್‌ನಲ್ಲಿದ್ದೆ, ಅವರು ಹತ್ತಿ ಬಟ್ಟೆಯ ಖಾಕಿ ಧರಿಸಿದ್ದರು. ಆದ್ದರಿಂದಲೇ ಅದಕ್ಕೆ ಬೇಗ ಬೆಂಕಿ ಹತ್ತಿಕೊಂಡಿತ್ತು.
ಅವರನ್ನು ಅಲ್ಲೇ ಮಲಗಿಸಿದಾಗ ಅವರ ತಲೆಯಲ್ಲಿ ತೀವ್ರ ಗಾಯವಾಗಿರುವುದು ಗೊತ್ತಾಯ್ತು.  ಎಡಭಾಗದಲ್ಲೇ ಆಗಿರಬೇಕು ಆ ಗಾಯ, ಸರಿಯಾಗಿ ನೆನಪಿಲ್ಲ. ಅವರ ತಲೆಗೂದಲು ಸುಟ್ಟು ಹೋಗಿದ್ದು, ಮುಖ ಕಪ್ಪಿಟ್ಟಿತ್ತು.
ಆ ಹೊತ್ತಲ್ಲಿ ಅವರು ನಿನಗೇನೂ ಆಗಿಲ್ಲ ತಾನೆ?ಎಂದರು. ನನಗೇನೂ ಅಗಿಲ್ಲ ಎಂದೆ. ನಾನು  ಬದುಕಲ್ಲ ಎಂದು ನನಗಿನಿಸುತ್ತಿದೆ ಎಂದು ಅವರು ಹೇಳಿದರು. 
ಆಮೇಲೆ, ನೀನು ನನ್ನ ತಾಯ್ನಾಡಿಗೆ ಮರಳಿದಾಗ ಅಲ್ಲಿರುವ ಸಹೋದರ ಸಹೋದರಿಯರಲ್ಲಿ, ನಾನು ನನ್ನ ಕೊನೆಯುಸಿರಿನವರೆಗೂ ದೇಶಕ್ಕಾಗಿ ಹೋರಾಡಿದ್ದೆ ಎಂದು ಹೇಳು. ಸ್ವಾತಂತ್ರ್ಯ ಹೋರಾಟ ಮುಂದುವರಿಯಲಿ. ಹಿಂದೂಸ್ತಾನ ಖಂಡಿತವಾಗಿಯೂ ಸ್ವತಂತ್ರವಾಗುತ್ತದೆ. ಅದನ್ನು ಯಾರೂ ಗುಲಾಮಗಿರಿಯಲ್ಲಿರಿಸಲು ಸಾಧ್ಯವಿಲ್ಲ ಎಂದರು. ಅವರನ್ನು ತಕ್ಷಣ ಹತ್ತಿರದಲ್ಲಿರುವ ನಾನ್‌ಮೋನ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆ ಹೊತ್ತಲ್ಲೇ ಅವರ ಸ್ಥಿತಿ ಚಿಂತಾಜನಕವಾಗಿತ್ತು.
ಹೀಗಂತ ಹೇಳಿದ್ದು ಕರ್ನಲ್ ಹಬೀಬ್ ಉರ್ ರೆಹ್‌ಮಾನ್, ಸುಭಾಷ್ ಚಂದ್ರ ಬೋಸ್ ಅವರ ಸಹಪ್ರಯಾಣಿಕ. ಎಡಿಸಿ ಆಗಿದ್ದ ರೆಹಮಾನ್  1945, ಆಗಸ್ಟ್ 18ರಂದು ತೈಪೆಯಲ್ಲಿ ವಿಮಾನ ಅಪಘಾತವಾದಾಗ ಬೋಸ್ ಜತೆಗೇ ಇದ್ದವರು.
ಆ ಅಪಘಾತದಲ್ಲಿ ಪಾರಾಗಿದ್ದ ರೆಹ್‌ಮಾನ್, ದೇಶ ವಿಭಜನೆಯಾದಾಗ ಪಾಕಿಸ್ತಾನದ ಹೆಚ್ಚುವರಿ ರಕ್ಷಣಾ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. 
1956ರಲ್ಲಿ ನೇತಾಜಿ ಮರಣದ ಬಗ್ಗೆ ತನಿಖೆ ನಡೆದಾಗ ರೆಹಮಾನ್, ಬೋಸ್‌ನ ಕೊನೆಯ ಕ್ಷಣದ ಕತೆಯನ್ನು ಹೇಳಿದ್ದಾರೆ. ನೇತಾಜಿಯವರ ಮರಣದ ತನಿಖೆಯ ಉಸ್ತುವಾರಿಯನ್ನು ಐಎನ್‌ಎಯಲ್ಲಿ ಮೇಜರ್ ಜನರಲ್ ಆಗಿದ್ದ ಶಾಹ್ ನವಾಜ್ ವಹಿಸಿದ್ದರು. 
ಹೀಗೆ ತನಿಖಾ ತಂಡದೊಂದಿಗೆ ರೆಹಮಾನ್ ಹಂಚಿಕೊಂಡ ಮಾಹಿತಿಯನ್ನು ಲಂಡನ್ ಮೂಲದ ಹಿರಿಯ ಪತ್ರಕರ್ತ ಆಶೀಸ್ ರೇ ತಮ್ಮ ವೆಬ್‌ಸೈಟ್ ನಲ್ಲಿ ಪ್ರಕಟ ಮಾಡಿದ್ದಾರೆ.
ನೇತಾಜಿಯವರು ವಿಮಾನ ಅಪಘಾತದಲ್ಲೇ ಮರಣ ಹೊಂದಿದ್ದರು ಎಂಬುದಕ್ಕೆ ಪುಷ್ಠಿ ನೀಡುವ ಹಲವಾರು ದಾಖಲೆಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. 
1945ರಲ್ಲಿ ಬೋಸ್ ಕಣ್ಮರೆಯಾದಾಗ, ಅವರು ಇನ್ನೂ ಬದುಕಿದ್ದಾರೆ ಎಂಬ ಹಲವಾರು ಕತೆಗಳು ಹಬ್ಬಿದ್ದವು. ಅವರನ್ನು ಅಲ್ಲಿ ನೋಡಿದ್ದೇವೆ, ಇಲ್ಲಿ ನೋಡಿದ್ದೇವೆ ಎಂದು ಹಲವಾರು ಜನರು ಹೇಳಿದ್ದರು. ಆದರೆ ಬೋಸ್ ತೈಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ ಮೃತಪಟ್ಟಿದ್ದಾರೆ ಎಂಬುದು ರೆಹಮಾನ್ ಅವರು ನೀಡಿರುವ ಮಾಹಿತಿಯ ಮೂಲಕ ಸ್ಪಷ್ಟವಾಗಿದೆ ಎಂದು ಆಶೀಸ್ ವಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com