ನವದೆಹಲಿ: 2012ರಲ್ಲಿ ಸೇನಾ ಕ್ಷಿಪ್ರಕ್ರಾಂತಿ ಯತ್ನ ನಡೆದದ್ದು ನಿಜ ಎಂದಿದ್ದ ಕೇಂದ್ರ ಮಾಜಿ ಸಚಿವ ಮನಿಶ್ ತಿವಾರಿ ಅವರನ್ನು ಕೇಂದ್ರ ಸಚಿವ ವಿ ಕೆ ಸಿಂಗ್ ಅವರು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ತಿವಾರಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ನಿರಾಕರಿಸಿದೆ.
ಮನಿಶ್ ತಿವಾರಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್, ಸೇನಾಪಡೆಯ ಅಸಹಜ ಚಲನವಲನ ಕುರಿತಾದ ವರದಿ ತಪ್ಪು ಎಂದಿದೆ.
'ಕಾಂಗ್ರೆಸ್ ಪಕ್ಷದ ಪರವಾಗಿ ನಾನು ಆ ವರದಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕುತ್ತೇನೆ. ಸರ್ಕಾರದ ಗಮನಕ್ಕೆ ಬಾರದೆ ಅಂತಹ ಯಾವುದೇ ಸೇನಾ ಚಲನವಲನ ನಡೆದಿಲ್ಲ' ಎಂದು ಕಾಂಗ್ರೆಸ್ ನಾಯಕ ಪಿ.ಸಿ.ಚಾಕೋ ಅವರು ಹೇಳಿದ್ದಾರೆ.
ಅಂದಿನ ಸೇನಾ ಮುಖ್ಯಸ್ಥ ವಿ.ಜೆ.ಸಿಂಗ್ ಅವರ ಅವಧಿಯಲ್ಲಿ ಸೈನಿಕರ ದಂಡೊಂದು ಹರಿಯಾಣದಿಂದ ದೆಹಲಿಯತ್ತ ಅಸಹಜವಾಗಿ ಹೊರಟಿತ್ತು ಎಂಬ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ನು ಪಕ್ಷ ಅಧಿಕೃತವಾಗಿಯೇ ತಳ್ಳಿಹಾಕಿದೆ ಎಂದು ಚಾಕೋ ತಿಳಿಸಿದ್ದಾರೆ.
ಇನ್ನು ಹಿರಿಯ ಕಾಂಗ್ರೆಸ್ ನಾಯಕ ಅಭಿಶೇಕ್ ಮುನು ಸಿಂಘ್ವಿ ಅವರು ಈ ವರದಿಯನ್ನು ತಳ್ಳಿಹಾಕಿದ್ದು, ಆ ವರದಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದಿದ್ದಾರೆ.