ಬೆಳಗಾವಿ: ಕುಡಚಿ ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಶಾಸಕ ಪಿ.ರಾಜೀವ್ ಅವರು ರೈತರ ಪರ ಹೋರಾಟ ನಿಲ್ಲಿಸಲು ಸಕ್ಕರೆ ಕಾರ್ಖಾನೆಗಳ ಮಾಲೀಕರಿಂದ 1 ಕೋಟಿ 60 ಲಕ್ಷ ರುಪಾಯಿ ಪಡೆದಿದ್ದಾರೆ ಎಂದು ಮಾಜಿ ಶಾಸಕ ಶ್ಯಾಮ್ ಘಾಟಗೆ ಅವರು ಆರೋಪಿಸಿದ್ದಾರೆ.
ಇಂದು ಕುಡಚಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಶಾಮ್ ಘಾಟಗೆ, ರಾಜೀವ್ ಅವರು ಶಾಸಕರಾದ ನಂತರ ಕಬ್ಬು ಬೆಳೆಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಹೋರಾಟ ಆರಂಭಿಸಿದ್ದರು. ಆದರೆ ಬಳಿಕ ರಾಜೀವ್ ಸೇರಿದಂತೆ ಇತರ ಮೂವರು ಕಾರ್ಖಾನೆ ಮಾಲೀಕರಿಂದ 1.60 ಕೋಟಿ ರುಪಾಯಿ ಹಣ ಪಡೆದು ಹೋರಾಟ ನಿಲ್ಲಿಸಿದ್ದಾರೆ ಎಂದರು.
ಶಾಸಕರಿಗೆ ಹಣ ಕೊಟ್ಟ ಮಾಲೀಕರು ಯಾರು ಎಂಬುದು ತಮಗೆ ಗೊತ್ತಿದೆ ಎಂದಿರುವ ಮಾಜಿ ಶಾಸಕ, ಈ ಸಂಬಂಧ ಹಾಲಿ ಶಾಸಕರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.
ಇನ್ನು ಶಾಮ್ ಘಾಟಗೆ ಅವರ ಸವಾಲ್‌ನ್ನು ಸ್ವೀಕರಿಸಿರುವ ಶಾಸಕ ಪಿ.ರಾಜೀವ್ ಅವರು, 1.60 ಕೋಟಿ ಅಲ್ಲ, ನಾನು ಅವರಿಂದ ಒಂದು ಕಪ್ ಟೀ ಸಹ ಕುಡಿದಿಲ್ಲ. ಘಾಟಗೆ ಅವರು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಅವರು ಹೇಳಿದೆ ಜಾಗಕ್ಕೆ ಈ ಕ್ಷಣವೇ ಬಹಿರಂಗ ಚರ್ಚೆಗೆ ಬರಲು ಸಿದ್ಧ. ಅವರು ನಾನು ಒಂದೇ ಒಂದು ಪೈಸೆ ಹಣ ಪಡೆದಿರುವುದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಅಲ್ಲ, ಆತ್ಮಹತ್ಯೆಗೂ ಸಿದ್ಧ ಎಂದಿದ್ದಾರೆ.
ನಾನು ಸಕ್ಕರೆ ಕಾರ್ಖಾನೆ ಮಾಲೀಕರಿಂದ ಹಣ ಪಡೆದಿಲ್ಲ ಮತ್ತು ರೈತರ ಪರ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರಾಜೀವ್ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಶಾಮ್ ಘಾಟಗೆ ಅವರು ಮುಂದಿನ ಮೂರು ದಿನಗಳಲ್ಲಿ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧಪಡಿಸದಿದ್ದರೆ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ.