ಮೌಲಾನ್ ಮಸೂದ್ ಅಜರ್ (ಸಂಗ್ರಹ ಚಿತ್ರ)
ಪ್ರಧಾನ ಸುದ್ದಿ
ಪಠಾಣ್‌ಕೋಟ್ ದಾಳಿ: ಪಾಕ್ ನಿಂದ ಜೈಷ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೇರಿ 12 ಉಗ್ರರ ಬಂಧನ
ಭಾರತ ಒತ್ತಡಕ್ಕೆ ಮಣಿದ ಪಾಕಿಸ್ತಾನ ಕಡೆಗೂ ಪಠಾಣ್‌ಕೋಟ್ ದಾಳಿಗೆ ಸಂಬಂಧಿಸಿದಂತೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ್ ಮಸೂದ್...
ಇಸ್ಲಾಮಾಬಾದ್: ಭಾರತ ಒತ್ತಡಕ್ಕೆ ಮಣಿದ ಪಾಕಿಸ್ತಾನ ಕಡೆಗೂ ಪಠಾಣ್‌ಕೋಟ್ ದಾಳಿಗೆ ಸಂಬಂಧಿಸಿದಂತೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ್ ಮಸೂದ್ ಅಜರ್ ಸೇರಿದಂತೆ 12 ಉಗ್ರರನ್ನು ಬಂಧಿಸಿದೆ. ಅಲ್ಲದೆ ಹೆಚ್ಚಿನ ತನಿಖೆಗಾಗಿ ಭಾರತಕ್ಕೆ ತನಿಖಾಧಿಕಾರಿಗಳನ್ನು ಕಳುಹಿಸುವ ಸಾಧ್ಯತೆ ಇದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.
ಜನವರಿ 2ರಂದು ಪಠಾಣ್‌ಕೋಟ್ ವಾಯುನೆಲೆ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಉಗ್ರ ಸಂಘಟನೆ ವಿರುದ್ಧ ಕ್ರಮ ತೆಗೆದುಕೊಂಡಿರುವ ಪಾಕ್, ಮೌಲಾನ್ ಮಸೂದ್ ಅಜರ್ ಹಾಗೂ ಆತನ ನಾಲ್ವರು ಆಪ್ತರನ್ನು ಇಸ್ಲಾಬಾದ್ ನಲ್ಲಿ ಬಂಧಿಸಿದೆ. ಇನ್ನುಳಿದ ಉಗ್ರರರನ್ನು ವಿವಿಧ ನಗರಗಳಲ್ಲಿ ಬಂಧಿಸಲಾಗಿದೆ ಎಂದು ವರದಿ ಮಾಡಲಾಗಿದೆ.
ಜೈಷ್-ಇ-ಮೊಹಮ್ಮದ್ ಸಂಘಟನೆಯ ಕಚೇರಿಗಳ ಮೇಲೂ ದಾಳಿ ನಡೆಸಿರುವ ಪಾಕ್ ಅಧಿಕಾರಿಗಳು, ಹಲವು ಕಚೇರಿಗಳಿಗೆ ಬೀಗ ಜಡಿಯಲಾಗಿದೆ.
ಪಠಾಣ್‌ಕೋಟ್ ದಾಳಿಯ ಹಿಂದೆ ಜೈಷ್-ಇ-ಮೊಹಮ್ಮದ್ ಸಂಘಟನೆಯ ಕೈವಾಡ ಇದೆ ಎಂದು ಆರೋಪಿಸಿದ್ದ ಭಾರತ, ಈ ಸಂಬಂಧ ಪಾಕಿಸ್ತಾನಕ್ಕೆ ಕೆಲವು ಸಾಕ್ಷ್ಯಗಳನ್ನು ಸಹ ನೀಡಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಪಾಕ್ ತನಿಖಾಧಿಕಾರಿಗಳು ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರು, ಪಾಕಿಸ್ತಾನಕ್ಕೆ ದಿಢೀರ್ ಭೇಟಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಬಳಿಕ ಜನವರಿ 15ಕ್ಕೆ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿತ್ತು. ಆದರೆ ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಕೈಗೊಳ್ಳುವ ಕ್ರಮದ ಮೇಲೆ ಭಾರತ ಮತ್ತು ಪಾಕ್ ನಡುವಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಬಗ್ಗೆ ನಿರ್ಧಾರವಾಗಲಿದೆ ಎಂದು ಭಾರತ ಖಡಕ್ ಸಂದೇಶ ರವಾನಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ