ಬೆಂಗಳೂರು: ಹೊಸ ಕನಸುಗಳನ್ನು ಹೊತ್ತ ಈ ಯುವಕನದು ಒಂದು ರೀತಿಯ ವಿಚಿತ್ರ ಸಮಸ್ಯೆ. ಬದುಕಿನ ಹಿನ್ನೆಲೆ ಭಿಕ್ಷಾಟನೆ. ಸಾಂಸ್ಕೃತಿಕ ಹಿನ್ನೆಲೆ ಪರಿಶಿಷ್ಟ ಜಾತಿ. ಅಮ್ಮನಿದ್ದರೂ ಆಶ್ರಯವಿಲ್ಲದ ಅನಾಥ. ಇಂಥ ಸನ್ನಿವೇಶದಲ್ಲಿ ಜಾತಿ ಪ್ರಮಾಣ ಸಿಕ್ಕರೆ ಸರ್ಕಾರದ ನೆರವು, ಸೌಲಭ್ಯಗಳ ಹಾದಿ ಸುಗಮವಾಗುತ್ತದೆ. ಆದರೆ, ಜಾತಿ ಪ್ರಮಾಣ ಪತ್ರ ನೀಡಲು ಸ್ಥಳೀಯ ಆಡಳಿತಗಳು ಸಿದ್ಧವಿಲ್ಲ. ಕಾರಣ, ಈತನ ಜಾತಿ ಯಾವುದೆಂದು ಹೇಳಲು ತಂದೆಯೂ ಇಲ್ಲ. ತಾಯಿಗೆ ಮಾತು, ಬುದ್ಧಿ ಇಲ್ಲ. ಹೀಗಾಗಿ ಮಂಡ್ಯದ ಆರ್‍ಟಿಒ ಕೊಳಗೇರಿ ನಿವಾಸಿ ರಘು ಬದುಕು ಜಾತಿ ಸಮಸ್ಯೆಗೆ ಸಿಲುಕಿದ್ದು, ಇದನ್ನು ಬಗೆಹರಿಸಿಕೊಳ್ಳಲು ಅವರು ಸೋಮವಾರ ವಿಧಾನಸೌಧದ ಮೆಟ್ಟಿಲೇರಿದ್ದರು.