ಆಮೀರ್‌ ಖಾನ್‌ ಬ್ರಾಂಡ್‌ ಇಂಡಿಯಾ ನಾಶಕ್ಕೆ ಯತ್ನಿಸಿದ್ದರು: ಡಿಐಪಿಪಿ ಕಾರ್ಯದರ್ಶಿ

ಇನ್‌ಕ್ರೆಡಿಬಲ್‌ ಇಂಡಿಯಾ ಅಭಿಯಾನದ ರಾಯಭಾರಿಯಾಗಿದ್ದ ಬಾಲಿವುಡ್‌ ನಟ ಆಮೀರ್‌ ಖಾನ್‌ ಅವರು 'ಬ್ರಾಂಡ್‌ ಇಂಡಿಯಾ' ವನ್ನು ನಾಶ...
ಆಮೀರ್ ಖಾನ್
ಆಮೀರ್ ಖಾನ್
ಅಹಮದಾಬಾದ್‌: ಇನ್‌ಕ್ರೆಡಿಬಲ್‌ ಇಂಡಿಯಾ ಅಭಿಯಾನದ ರಾಯಭಾರಿಯಾಗಿದ್ದ ಬಾಲಿವುಡ್‌ ನಟ ಆಮೀರ್‌ ಖಾನ್‌ ಅವರು 'ಬ್ರಾಂಡ್‌ ಇಂಡಿಯಾ' ವನ್ನು ನಾಶ ಮಾಡಲು ಯತ್ನಿಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.
ಇನ್‌ಕ್ರೆಡಿಬಲ್‌ ಇಂಡಿಯಾದಿಂದ ಆಮೀರ್‌ ಖಾನ್‌ ಅವರನ್ನು ಕೈಬಿಟ್ಟಿರುವುದನ್ನು ಸಮರ್ಥಿಸಿಕೊಂಡಿರುವ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ(ಡಿಐಪಿಪಿ)ಯ ಕಾರ್ಯದರ್ಶಿ ಅಮಿತಾಭ್‌ ಕಾಂತ್‌ ಅವರು, ಆಮೀರ್‌ ಖಾನ್ "ಭಾರತ ಅಸಹಿಷ್ಣು ದೇಶ ಎಂದು ಹೇಳುವ ಮೂಲಕ  ತಮ್ಮ ಬ್ರಾಂಡ್‌ ಅಂಬಾಸಡರ್‌ ಪಾತ್ರಕ್ಕೆ ವ್ಯತಿರಿಕ್ತವಾದ ಕೆಲಸವನ್ನು ಮಾಡಿದ್ದು, ದೇಶದ ಪ್ರತಿಷ್ಠೆಯನ್ನು ನಾಶ ಮಾಡಲು ಯತ್ನಿಸಿದರು' ಎಂದು ಹೇಳಿದ್ದಾರೆ.
ಬ್ರಾಂಡ್‌ ಅಂಬಾಸಡರ್‌ ಆಗಿರುವವರ ಕೆಲಸ ದೇಶದ ಬ್ರಾಂಡ್‌ ಇಮೇಜನ್ನು ಪ್ರಚುರಪಡಿಸುವುದು. ಭಾರತಕ್ಕೆ ವಿದೇಶೀ ಪ್ರವಾಸಿಕರು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುವುದೇ ಬ್ರಾಂಡ್‌ ಅಂಬಾಸಡರ್‌ ಕೈಗೊಳ್ಳುವ ಅದ್ಭುತ ಪ್ರಚಾರ ಕಾರ್ಯದಿಂದಾಗಿ. ಆದರೆ ಅದೇ ಬ್ರಾಂಡ್‌ ಅಂಬಾಸಡರ್‌ ಭಾರತವನ್ನು ಅಸಹಿಷ್ಣು ದೇಶವೆಂದು ಹೇಳುವುದಾದರೆ ಆತ ನಿಜಕ್ಕೂ ದೇಶದ ಬ್ರಾಂಡ್‌ ಅಂಬಾಸಡರ್‌ ಆಗಿ ಕೆಲಸ ಮಾಡುತ್ತಿಲ್ಲ ಎಂದೇ ಅರ್ಥ. ಮಾತ್ರವಲ್ಲ ಆತ ಬ್ರಾಂಡ್‌ ಇಂಡಿಯಾವನ್ನು ನಾಶ ಮಾಡುತ್ತಿದ್ದಾನೆ ಎಂದು ಕೂಡ ಅರ್ಥ' ಎಂಬುದಾಗಿ ಕಾಂತ್‌ ಹೇಳಿದ್ದಾರೆ.
ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್‌ ಶರ್ಮಾ ಅವರ ಪ್ರಕಾರ ಆಮೀರ್‌ ಅವರು ಮೆಕ್ಯಾನ್‌ ಎರಿಕ್ಸನ್‌ ಕಂಪೆನಿಯೊಂದಿಗಿನ ಜಾಹೀರಾತು ಅಭಿಯಾನದ ಗುತ್ತಿಗೆ ಹೊಂದಿದ್ದರೇ ಹೊರತು ಭಾರತ ಸರಕಾರದ ಅಭಿಯಾನ ಗುತ್ತಿಗೆಯನ್ನಲ್ಲ. ಈಗ ಎರಿಕ್ಸನ್‌ ಕಂಪೆನಿಯ ಜತೆಗಿನ ಗುತ್ತಿಗೆಯು ಮುಗಿದಿರುವುದರಿಂದ ಆ ಕಂಪೆನಿಯು ಆಮೀರ್‌ ಖಾನ್‌ ಜತೆಗೆ ಹೊಂದಿದ್ದ ಗುತ್ತಿಗೆ ಕೂಡ ತನ್ನಿಂತಾನೇ ರದ್ದಾದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com