ಹೈದರಾಬಾದ್: ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಕೇಂದ್ರ ಸಚಿವರೇ ಕಾರಣ ಎಂದು ಆರೋಪಿಸಿ ಹೈದ್ರಾಬಾದ್ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಇತ್ತ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ನೀಡಿದ ದೂರಿಗೆ ಪ್ರತಿಕ್ರಿಯೆ ನೀಡಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಬರೆದಿರುವ ಪತ್ರವೊಂದು ಸಿಕ್ಕಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬರೆದ ಪತ್ರದಲ್ಲಿ ವಿಐಪಿ ದೂರಿಗೆ ಪ್ರತಿಕ್ರಿಯಿಸಿ ಎಂದು ಆದೇಶಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಮೃತಿ ಇರಾನಿ, ವಿಶ್ವ ವಿದ್ಯಾಲಯದ ವಿಷಯದಲ್ಲಿ ನಾನು ಮಧ್ಯ ಪ್ರವೇಶ ಮಾಡಿಲ್ಲ. ಈ ವಿಶ್ವ ವಿದ್ಯಾಲಯದ ನಿಯಂತ್ರಣ ವಿಶ್ವವಿದ್ಯಾಲಯಕ್ಕೇ ಸಂಬಂಧಿಸಿದ್ದು, ಸರ್ಕಾರದಲ್ಲ ಎಂದು ಹೇಳಿದ್ದಾರೆ.
ಎರಡು ವಾರಗಳ ಹಿಂದೆ ವಿವಿ ವಿದ್ಯಾರ್ಥಿ ನಿಲಯದಿಂದ ಉಚ್ಛಾಟಿತಗೊಂಡಿದ್ದ ರೋಹಿತ್ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದನು. ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಎಬಿವಿಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪದಲ್ಲಿ ರೋಹಿತ್ ಸೇರಿದಂತೆ ಇನ್ನು ನಾಲ್ವರು ವಿದ್ಯಾರ್ಥಿಗಳನ್ನು ವಿವಿಯಿಂದ ವಜಾಗೊಳಿಸಲಾಗಿತ್ತು.
ಈ ಹಿಂದೆ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದಕ್ಕೆ ಸಾಕ್ಷಿಗಳೇನೂ ಇಲ್ಲ ಎಂದು ವಿವಿ ಹೇಳಿತ್ತು. ಆದರೆ ನಾಲ್ಕು ತಿಂಗಳ ನಂತರ 5 ವಿದ್ಯಾರ್ಥಿಗಳು ವಜಾ ಗೊಳಿಸಿ, ಹಾಸ್ಟೆಲ್ ಮತ್ತು ಭೋಜನಶಾಲೆಯನ್ನೂ ಬಳಸದಂತೆ ತಾಕೀತು ನೀಡಿತ್ತು.
ಪ್ರತಿಭಟನಾಕಾರರು ಹೇಳುವುದೇನು?
ಸಿಕಂದರಾ ಬಾದ್ನ ಬಿಜೆಪಿ ಸಂಸದರಾಗಿರುವ ಬಂಡಾರು ದತ್ತಾತ್ರೇಯ ಅವರು ಹೈದ್ರಾಬಾದ್ ವಿಶ್ವ ವಿದ್ಯಾನಿಲಯದಲ್ಲಿ ಜಾತಿವಾದ, ತೀವ್ರವಾದ ಮತ್ತು ದೇಶದ್ರೋಹಿ ರಾಜಕಾರಣಗಳು ನಡೆಯುತ್ತಿವೆ ಎಂದು ಕೇಂದ್ರ ಶಿಕ್ಷಣ ಸಚಿವೆ ಸ್ಮೃತಿ ಇರಾನಿಯವರಿಗೆ ಪತ್ರ ಬರೆದಿದ್ದರು.
ಪತ್ರದಲ್ಲಿ ಎಬಿವಿಪಿ ಕಾರ್ಯಕರ್ತ ನಂದನಂ ಸುಶೀಲ್ ಕುಮಾರ್ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿಗಳ ವಿರುದ್ಧ ವಿಶ್ವವಿದ್ಯಾನಿಲಯ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿತ್ತು.
ಇದಕ್ಕೆ ಉತ್ತರವಾಗಿ ಸೆಪ್ಟೆಂಬರ್ 3 ರಂದು ಸ್ಮೃತಿ ಇರಾನಿಯವರ ಸಚಿವಾಲಯ ಹೈದ್ರಾಬಾದ್ ವಿವಿಗೆ ಇಮೇಲ್ ಕಳುಹಿಸಿದೆ. ಆ ಇಮೇಲ್ ನಲ್ಲಿ ಬಂಡಾರು ಅವರು ಕಳಿಸಿದ ದೂರಿನ ಪ್ರತಿ ಜತೆ "Comments on VIP reference of Bandaru Dattatreya, MoS for Labour and Employment," ಎಂದು ಬರೆಯಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 24, ಅಕ್ಟೋಬರ್ 6 ಮತ್ತು 20, ನವೆಂಬರ್ 19 ರಂದು ಮೂರು ಬಾರಿ ಪತ್ರ ಕಳುಹಿಸಲಾಗಿದೆ.
ಡಿಸೆಂಬರ್ 21ರಂದು ವಿವಿ ಈ ಹಿಂದೆ ಹೇಳಿದ್ದ ಮಾತು ಬದಲಿಸಿ, 5 ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಂಡಿತ್ತು.