ದಶಕಗಳಿಂದ ನಿಗೂಢವಾಗಿ ಉಳಿದಿರುವ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ಚಂದ್ರ ಬೋಸ್ ಕಣ್ಮರೆ ರಹಸ್ಯ ಇದೀಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದ್ದು, ನೇತಾಜಿ ಜನ್ಮದಿನವಾದ ಜ.23ರಂದು ಅವರಿಗೆ ಸಂಬಂಧಿಸಿದ ಕಡತ ಬಿಡುಗಡೆ ಮಾಡುವುದಾಗಿ ಕಳೆದ ವರ್ಷ ಅ.14ರಂದು ಬೋಸ್ ಕುಟುಂಬದ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು.
ಅದರಂತೆ ಶನಿವಾರ ಸರ್ಕಾರ ಕಡತ ಬಿಡುಗಡೆ ಪ್ರಕ್ರಿಯೆಗೆ ಚಾಲನೆ ನೀಡಲಿದೆ ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ತಿಳಿಸಿದ್ದರು.
"ರಾಷ್ಟ್ರೀಯ ದಾಖಲೆಗಳ ಕೇಂದ್ರ (ಎನ್ಐಎ) ನೇತಾಜಿಯವರಿಗೆ ಸಂಬಂಧಿಸಿದ 100 ಕಡತಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಿದೆ. ಡಿಜಿಟಲೀಕರಣ ಮತ್ತು ಇತರ ಕ್ರಮಗಳ ಬಳಿಕ ಅದು ಎಲ್ಲರಿಗೂ ಲಭ್ಯವಾಗಲಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
1945ರಲ್ಲಿ ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿಯೇ ನೇತಾಜಿ ಮೃತಪಟ್ಟಿದ್ದಾಗಿ ಇತ್ತೀಚಿಗಷ್ಟೇ ಬ್ರಿಟನ್ನಿನ ವೆಬ್‌ಸೈಟ್ ವೊಂದು ವರದಿ ಮಾಡಿತ್ತು. ಈ ಸಂಬಂಧ ಅದು ದಾಖಲೆಯನ್ನೂ ಕೂಡ ಬಿಡುಗಡೆ ಮಾಡಿತ್ತು. ಈ ಬೆಳವಣಿಗೆ ನಡುವೆಯೇ ಶನಿವಾರ ಕೇಂದ್ರ ಸರ್ಕಾರ ದಾಖಲೆ ಬಿಡುಗಡೆ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ.