ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಸ್ಫೋಟಿಸಿದ್ದು ನಾನೇ: ಜಾವಿದ್ ತಪ್ಪೊಪ್ಪಿಗೆ

ಹೊಸ ವರ್ಷ ಆಚರಣೆಗೂ ಮುನ್ನ ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದು ನಾನೇ ಎಂದು ಬಂಧಿತ ಇಂಡಿಯನ್ ಮುಜಾಹಿದ್ದಿನ್ ಉಗ್ರ ಜಾವಿದ್...
ಸ್ಫೋಟ ನಡೆದ ಸ್ಥಳ (ಸಂಗ್ರಹ ಚಿತ್ರ)
ಸ್ಫೋಟ ನಡೆದ ಸ್ಥಳ (ಸಂಗ್ರಹ ಚಿತ್ರ)
ಬೆಂಗಳೂರು: ಹೊಸ ವರ್ಷ ಆಚರಣೆಗೂ ಮುನ್ನ ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದು ನಾನೇ ಎಂದು ಬಂಧಿತ ಇಂಡಿಯನ್ ಮುಜಾಹಿದ್ದಿನ್ ಉಗ್ರ ಜಾವಿದ್ ರಫೀಕ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಕಳೆದ ಜನವರಿ 23ರಂದು ಪರಪ್ಪನ ಅಗ್ರಹಾರ ಬಳಿಯ ವಿನಾಯಕನಗರದಲ್ಲಿ ಶಂಕಿತ ಉಗ್ರ ಜಾವಿದ್ ರಫೀಕ್‌ನನ್ನು ಬಂಧಿಸಿದ್ದ ರಾಷ್ಟ್ರೀಯ ತನಿಖಾ ತಂಡ, ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ 2014, ಡಿಸೆಂಬರ್ 28ರಂದು ಕೋಕನಟ್ ಗ್ರೋವ್ ಹೋಟೆಲ್ ಬಳಿ ಬಾಂಬ್ ಇಟ್ಟಿದ್ದು ನಾನೇ ಎಂದು ಒಪ್ಪಿಕೊಂಡಿದ್ದಾನೆ.
6 ತಿಂಗಳ ಹಿಂದೆ ಕೇಸ್ ಕೈಗೆತ್ತಿಕೊಂಡಿದ್ದ ಎನ್‌ಐಎ ತಂಡ ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.
ಬೆಂಗಳೂರಿನಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಜಾವಿದ್, ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ‘ಜಾವಿದ್ ರಫೀಕ್’ ಹೆಸರಿನಲ್ಲಿ ನಕಲಿ ಖಾತೆ ತೆರೆದು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸದಸ್ಯರ ಜತೆ ಸಂಪರ್ಕದಲ್ಲಿದ್ದ. ಅಲ್ಲದೆ, ಆಗಾಗ್ಗೆ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಕ್ಕೆ ಹೋಗಿ ಅಲ್ಲೆಲ್ಲ ಸಂಘಟನೆ ವಿಸ್ತರಿಸುವ ಕೆಲಸ ಮಾಡುತ್ತಿದ್ದ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆಯ ಹೊಸ್ತಿಲಲ್ಲೇ, ಕೋಕನಟ್ ಗ್ರೋವ್ ರೆಸ್ಟೊರೆಂಟ್ ಬಳಿ ರಾತ್ರಿ 8.30ರ ಸುಮಾರಿಗೆ ಈ ಸ್ಫೋಟ ನಡೆದಿತ್ತು. ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ನಡೆಸಲಾಗಿದ್ದ ಈ ಕೃತ್ಯಕ್ಕೆ, ಕ್ರಿಸ್‌ಮಸ್ ಆಚರಣೆಗೆ ನಗರಕ್ಕೆ ಬಂದಿದ್ದ ತಮಿಳುನಾಡು ಮೂಲದ ಭವಾನಿ (38) ಎಂಬುವರು ಬಲಿಯಾಗಿದ್ದರು. ಅಲ್ಲದೆ, ಮತ್ತಿಬ್ಬರು ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com