ನಾಳೆ ಮೋದಿ ಸಂಪುಟ ವಿಸ್ತರಣೆ: ರಾಜ್ಯದ ರಮೇಶ್ ಜಿಗಜಿಣಗಿ ಸೇರಿ 9 ಮಂದಿಗೆ ಸಚಿವ ಸ್ಥಾನ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದು, ರಾಜ್ಯದ ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ....
ರಮೇಶ್ ಜಿಗಜಿಣಗಿ
ರಮೇಶ್ ಜಿಗಜಿಣಗಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದು, ರಾಜ್ಯದ ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಸೇರಿದಂತೆ 9 ಮಂದಿ ಕೇಂದ್ರ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ.
ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಸಚಿವ ಸಂಪುಟ ವಿಸ್ತರಣೆ ಖಚಿತಪಡಿಸಿದ್ದು ನಾಳೆ ಬೆಳಗ್ಗೆ 11 ಕ್ಕೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇನ್ನು ವಿಜಯಪುರ ಕ್ಷೇತ್ರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಖುದ್ದಾಗಿ ದೂರವಾಣಿ ಕರೆ ಮಾಡಿ ನವದೆಹಲಿಯ ತಮ್ಮ ನಿವಾಸಕ್ಕೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶಾ ಅವರ ಕರೆಯ ಹಿನ್ನೆಲೆಯಲ್ಲಿ ರಮೇಶ್ ಜಿಗಜಿಣಗಿ ಅವರು ಇಂದು ಮಧ್ಯಾಹ್ನ ನವದೆಹಲಿಗೆ ತೆರಳಲಿದ್ದು, ಅಲ್ಲಿ ಶಾ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಈ ಬಾರಿ ರಮೇಶ್ ಜಿಗಜಿಣಗಿ ಸೇರಿದಂತೆ ಕನಿಷ್ಠ 9 ಮಂದಿ ಮೋದಿ ಸಂಪುಟ ಸೇರ್ಪಡೆಯಾಗುತ್ತಿದ್ದು, ಹಾಲಿ ಸ್ವತಂತ್ರ ಖಾತೆ ಸಚಿವರಿಬ್ಬರಿಗೆ ಸಂಪುಟ ದರ್ಜೆ ಸಚಿವರಾಗಿ ಬಡ್ತಿ ನೀಡಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಂಧನ, ಕಲ್ಲಿದ್ದಲು ಮತ್ತು ಪುನರ್ಬಳಕೆ ಖಾತೆ ಸಚಿವ ಪಿಯೂಶ್ ಗೋಯಲ್ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗುತ್ತಿದೆ.
5 ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಈಗ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಮೋದಿ ಸಂಪುಟದಲ್ಲಿ ಆ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಮುಂದಾಗಿದೆ. ಉತ್ತರ ಪ್ರದೇಶದ ಅನುಪ್ರಿಯಾ ಪಟೇಲ್, ಅಜಯ್ ತಮ್ತಾ, ಮಹೇಂದ್ರನಾಥ್ ಪಾಂಡೆ, ಕೃಷ್ಣಾ ರಾಜ್, ರಾಜಸ್ಥಾನದ ಅರ್ಜನ್ ರಾಮ್ ಮೇಘಾವಾಲ್ ಹಾಗೂ ಪಿಪಿ ಚೌಧರಿ, ಮಹಾರಾಷ್ಟ್ರದ ಅನಿಲ್ ದೇಸಾಯಿ, ಪಶ್ಚಿಮ ಬಂಗಾಳದ ಎಸ್.ಎಸ್. ಅಹ್ಲುವಾಲಿಯಾ ಅವರು ನಾಳೆ ಮೋದಿ ಸಂಪುಟ ಸೇರುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com