ನವದೆಹಲಿ: ಜುಲೈ 1 ರಂದು ನಡೆದ ಢಾಕಾ ಭಯೋತ್ಪಾದಕ ದಾಳಿಯ ದಾಳಿಕೋರರು ವಿವಾದಾತ್ಮಕ ಇಸ್ಲಾಮಿಕ್ ಗುರು ಜಾಕಿರ್ ನಾಯಕ್ ಅವರನ್ನು ಅನುಸರಿಸುತ್ತಿದ್ದರು ಎಂಬ ಸುದ್ದಿಯ ಬೆನ್ನಲ್ಲೇ ಸರ್ಕಾರ ಜಾಕಿರ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಸೂಚನೆ ಬುಧವಾರ ನೀಡಿದೆ.
ಇದು ಕಾನೂನಿನ ಪ್ರಶ್ನೆ ಮತ್ತು ಇದಕ್ಕೆ ಸಂಬಂಧಿಸಿದ ಏಜೆನ್ಸಿಗಳು ಸೂಕ್ತ ಕ್ರಮ ತೆಗೆದುಕೊಳ್ಳಲಿವೆ ಎಂದು ಗೃಹ ಖಾತೆಯ ರಾಜ್ಯ ಸಚಿವೆ ಕಿರಣ್ ರಿಜಿಜು ವರದಿಗಾರರಿಗೆ ತಿಳಿಸಿದ್ದಾರೆ.
"ಭಯೋತ್ಪಾದನಾ ನಿರ್ಮೂಲನೆಗೆ ನಾವು ಎಲ್ಲ ರೀತಿಯ ಸಹಕಾರ ನೀಡಲಿದ್ದೇವೆ" ಎಂದು ಅವರು ಹೇಳಿದ್ದಾರೆ.
ಈಗಾಗಲೇ ಹಲವಾರು ರಾಷ್ಟ್ರಗಳು ಮಾಡಿರುವಂತೆ ವಿವಾದಾತ್ಮಕ ಇಸ್ಲಾಮಿಕ್ ಗುರುವನ್ನು ಸರ್ಕಾರ ನಿಷೇಧಿಸಲಿದೆಯೇ ಎಂಬ ಪ್ರಶ್ನೆಗೆ "ತೆಗೆದುಕೊಳ್ಳಲಿರುವ ಕ್ರಮಗಳ ಬಗ್ಗೆ ಸಚಿವ ಘೋಷಣೆ ಮಾಡುವುದು ಬುದ್ಧಿವಂತಿಕೆಯಲ್ಲ" ಎಂದು ಕೂಡ ಅವರು ಹೇಳಿದ್ದಾರೆ.
ಇತರ ಧರ್ಮಗಳ ವಿರುದ್ಧ ದ್ವೇಷದ ಬೋಧನೆ ನೀಡುವ ಆರೋಪದ ಮೇಲೆ ಮುಂಬೈ ಮೂಲದ ಇಸ್ಲಾಮಿಕ್ ಸಂಶೋಧನಾ ಪ್ರತಿಷ್ಠಾನದ ಸಂಸ್ಥಾಪಕ ಜಾಕಿರ್ ನಾಯಕ್ ಅವರನ್ನು ಬ್ರಿಟನ್ ಮತ್ತು ಕೆನಡಾ ದೇಶಗಳು ನಿಷೇಧಿಸಿವೆ.