"ಆಕ್ರಮಿತ" ಜಮ್ಮು ಮತ್ತು ಕಾಶ್ಮೀರದಲ್ಲಿ ಜನಾಭಿಮತ ಸಂಗ್ರಹಿಸಿ, ಅಲ್ಲಿನ ನಿವಾಸಿಗಳು ಭಾರತದಲ್ಲಿ ಇರಲು ಬಯಸುತ್ತಾರೆಯೇ ಅಥವಾ ಪಾಕಿಸ್ತಾನದ ಭಾಗವಾಗುತ್ತಾರೆಯೇ ಎಂಬುದನ್ನು ನಿರ್ಧರಿಸಬೇಕು
ಇಸ್ಲಮಾಬಾದ್: "ಆಕ್ರಮಿತ" ಜಮ್ಮು ಮತ್ತು ಕಾಶ್ಮೀರದಲ್ಲಿ ಜನಾಭಿಮತ ಸಂಗ್ರಹಿಸಿ, ಅಲ್ಲಿನ ನಿವಾಸಿಗಳು ಭಾರತದಲ್ಲಿ ಇರಲು ಬಯಸುತ್ತಾರೆಯೇ ಅಥವಾ ಪಾಕಿಸ್ತಾನದ ಭಾಗವಾಗುತ್ತಾರೆಯೇ ಎಂಬುದನ್ನು ನಿರ್ಧರಿಸಬೇಕು ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ.
ಭದ್ರತಾ ಪಡೆಗಳು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿ ಅವನನ್ನು ಹತ್ಯೆ ಮಾಡಿರುವುದು ಮತ್ತು ಇದರಿಂದ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಭುಗಿಲೆದ್ದಿರುವುದಕ್ಕೆ 'ತೀವ್ರ ದುಃಖ ಮತ್ತು ಕಳವಳ' ವ್ಯಕ್ತಪಡಿಸಿರುವ ಶರೀಫ್ ಮೇಲಿನ ಹೇಳಿಕೆ ನೀಡಿದ್ದಾರೆ.
"ಭಾರತೀಯ ಪಡೆಗಳು ನಾಗರಿಕರನ್ನು ಹತ್ಯೆಗಯ್ಯುತ್ತಿರುವುದು ಮತ್ತು ಕಾಶ್ಮೀರದಲ್ಲಿ ಕ್ರೂರತೆಯನ್ನು ಪ್ರದರ್ಶಿಸಿರುವುದು ವಿಷಾದನೀಯ" ಎಂದು ರೇಡಿಯೋ ಪಾಕಿಸ್ತಾನದಲ್ಲಿ ಹೇಳಿರುವುದಾಗಿ ವರದಿಯಾಗಿದೆ.
"ಆಕ್ರಮಿತ ಕಾಶ್ಮೀರ'ದಲ್ಲಿ ಮಾನವ ಹಕ್ಕುಗಳನ್ನು ಗೌರವಿಸುವಂತೆ ಅವರು ಭಾರತಕ್ಕೆ ಆಗ್ರಹಿಸಿದ್ದಾರೆ.
ಕಾಶ್ಮೀರದ ಪ್ರತ್ಯೇಕವಾದಿ ಮುಖಂಡರನ್ನು ಭಾರತ ಬಂಧಿಸುತ್ತಿರುವುದನ್ನು ಮುಂದುವರೆಸಿದೆ ಎಂದು ದೂರಿ ಶರೀಫ್ ಕಳವಳ ವ್ಯಕ್ತಪಡಿಸಿದ್ದಾರೆ.