ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರು ಶಾಂತಿ ಮಾತು ಸೌಹಾರ್ದತೆ ಕಾಪಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮೊರೆಯಿಟ್ಟಿದ್ದಾರೆ. ಕಣಿವೆಯಲ್ಲಿ ಕರ್ಫ್ಯೂ ಇಂದೂ ಮುಂದುವರೆದಿದೆ.
ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮೋದಿ ಕಣಿವೆಯ ಪರಿಸ್ಥಿತಿಯ ಆವಲೋಕನ ನಡೆಸಿದ್ದಾರೆ.
"ಕಣಿವೆಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರು ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಪ್ರಧಾನಿ ಮೊರೆಯಿಟ್ಟಿದ್ದಾರೆ" ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸಭೆ ನಡೆದ ನಂತರ ವರದಿಗಾರರಿಗೆ ತಿಳಿಸಿದ್ದಾರೆ.
ಈ ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್, ವಿತ್ತ ಸಚಿವ ಅರುಣ್ ಜೇಟ್ಲಿ, ಭದ್ರತಾ ಸಚಿವ ಮನೋಹರ್ ಪರ್ರಿಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಹಿರಿಯ ಭದ್ರತಾ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ರಾಜ್ಯಕ್ಕೆ ಬೇಕಾದ ಎಲ್ಲ ಸಹಾಯ ಒದಗಿಸುವುದಾಗಿ ಪ್ರಧಾನಿ ತಿಳಿಸಿರುವುದಾಗಿ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಮುಗ್ಧ ಜನರಿಗೆ ತೊಂದರೆಯಾಗಬಾರದೆಂದು ಭರವಸೆ ವ್ಯಕ್ತಪಡಿಸಿರುವ ಪ್ರಧಾನಿ, ಅಮರನಾಥ ಯಾತ್ರೆಯ ಬಗ್ಗೆಯೂ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಹಿಜಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯಿಂದ ಕಣಿವೆಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಒಬ್ಬ ಪೊಲೀಸ್ ಮತ್ತು 29 ನಾಗರಿಕರು ಮೃತಪಟ್ಟಿದ್ದಾರೆ.