ಗಣಪತಿ ಆತ್ಮಹತ್ಯೆಗೂ ಮುನ್ನ ಮಾಧ್ಯಮಕ್ಕೆ ಹೇಳಿರುವುದೆಲ್ಲಾ ಸತ್ಯ?: ಸಿಐಡಿ ವರದಿ

ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರ ಬಿದ್ದಿದ್ದು,...
ಗಣಪತಿ
ಗಣಪತಿ
Updated on
ಬೆಂಗಳೂರು: ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರ ಬಿದ್ದಿದ್ದು, ಗಣಪತಿ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವಲ್ಲ. ವೃತ್ತಿ ಕಿರುಕುಳ ಕಾರಣ ಎಂದು ಸಿಐಡಿ ವರದಿ ಹೇಳಿದೆ.
ಗಣಪತಿ ಆತ್ಮಹತ್ಯೆ ಪ್ರಕರಣ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಪ್ರಾಥಮಿಕ ತನಿಖಾ ವರದಿಯನ್ನು ನಿನ್ನೆ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದು, ಆತ್ಮಹತ್ಯೆಗೂ ಮುನ್ನ ಗಣಪತಿ ಮಾಧ್ಯಮ ಸಂದರ್ಶನದಲ್ಲಿ ಹೇಳಿರುವುದೆಲ್ಲಾ ಸತ್ಯ ಎಂದು ತನಿಖಾಧಿಕಾರಿ ವರದಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಆತ್ಮಹತ್ಯೆ ಪ್ರಕರಣವನ್ನು ತಿರುಚಲು ಸ್ಥಳೀಯ ಪೊಲೀಸರು ಯತ್ನಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು ಹಲವು ಲೋಪಗಳನ್ನು ಎಸಗಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯ ಸಿಪಿಐ ಮೇದಪ್ಪ ಅವರು ಗಣಪತಿ ಆತ್ಮಹತ್ಯೆ ಪ್ರಕರಣವನ್ನು ತಿರುಚಲು ಯತ್ನಿಸಿದ್ದಾರೆ. ಜುಲೈ 7ರಂದು ಸಂಜೆ 5ಕ್ಕೆ ಗಣಪತಿ ಆತ್ಮಹತ್ಯೆ ಮಾಹಿತಿ ಲಭ್ಯವಾಗಿದೆ. ಆದರೂ ಸಿಪಿಐ ಮೇದಪ್ಪ ಅವರು ಗಣಪತಿ ಪತ್ನಿಗೆ ಮಾಹಿತಿ ನೀಡದೇ, ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳದೆ ವಿಳಂಬ ಮಾಡಿದ್ದಾರೆ. ರಾತ್ರಿ 8 ಗಂಟೆಯವರೆಗೂ ತನಿಖೆಯನ್ನೇ ಆರಂಭಿಸದೇ ಪೊಲೀಸರು ಕರ್ತವ್ಯಲೋಪ ಎಸಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸ್ಥಳೀಯ ಪೊಲೀಸರು ಗಣಪತಿ ಆತ್ಮಹತ್ಯೆ ಬಗ್ಗೆ ಮೊದಲು ಪತ್ನಿ ಪಾವನಾಗೆ ಮಾಹಿತಿ ನೀಡಬೇಕಾಗಿತ್ತು. ಆದರೆ ಮೊದಲು ಗಣಪತಿ ತಂದೆ ಕುಶಾಲಪ್ಪಗೆ ಮಾಹಿತಿ ನೀಡಿ, ಅವರಿಂದ ಹೇಳಿಕೆ ಪಡೆದ ನಂತರ ರಾತ್ರಿ 8ಗಂಟೆಗೆ ಪತ್ನಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಗಣಪತಿ ಸಂದರ್ಶನದ ಬಗ್ಗೆ ಗೊತ್ತಿರದ ಹಿನ್ನೆಲೆಯಲ್ಲಿ ಕುಶಾಲಪ್ಪ ಅವರು ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವಿರಬಹುದು ಎಂದು ಮಾಧ್ಯಮಕ್ಕೆ ಹೇಳಿದ್ದರು.
ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ಸಹೋದರ ತಮ್ಮಯ್ಯಗೆ ಮೆಸೇಜ್ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಸಹೋದರ ಡಿವೈಎಸ್ಪಿ ತಮ್ಮಯ್ಯ ಅವರು ಗಣಪತಿ ಮೆಸೇಜ್ ಅನ್ನು ತಡವಾಗಿ ನೋಡಿದ್ದಾರೆ. ಮೆಸೇಜ್ ನೋಡುವ ವೇಳೆಗಾಗಲೇ ಎಂ.ಕೆ.ಗಣಪತಿ ಸ್ಥಳೀಯ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಇದನ್ನು ನೋಡಿದ ತಮ್ಮಯ್ಯ ಅವರು ಪೊಲೀಸರಿಗೆ ಟವರ್ ಲೊಕೇಷನ್ ನೋಡುವಂತೆ ಸೂಚಿಸಿದ್ದಾರೆ. ಟವರ್ ಲೊಕೇಷನ್ ಪರಿಶೀಲಿಸಿದಾಗ ಗಣಪತಿ ಮಡಿಕೇರಿಯಲ್ಲಿರುವುದು ಪತ್ತೆಯಾಗಿದೆ. ನಂತರ ಗಣಪತಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ನಾಲ್ಕು ದಿನಗಳಿಂದ ತನಿಖೆ ನಡೆಸಿ, ಸಾಕ್ಷ್ಯ ಸಂಗ್ರಹ ಮಾಡಿ ವರದಿ ನೀಡಿರುವ ಅಧಿಕಾರಿಗಳು, ಕಿರುಕುಳದ ಬಗ್ಗೆ ಗಣಪತಿ ಮಾಡಿರುವ ಆರೋಪಗಳೆಲ್ಲಾ ಸತ್ಯ ಎಂದು ಸಿಐಡಿ ಮೂಲಗಳು ತಿಳಿಸಿರುವುದಾಗಿ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com