
ದಾಂಡೇಲಿ: ರಸ್ತೆ ಅಪಘಾತಗಳ ಬಗ್ಗೆ ನಡೆದಿರುವ ಸಂಶೋಧನೆ ಈಗ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್ ಟಿಸಿಎ) ವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸ್ಪೀಡ್ ಬ್ರೇಕರ್ ಗಳನ್ನು ಅಳವಡಿಸಲು ಎನ್ ಟಿಎ ಅನುದಾನ ಬಿಡುಗಡೆ ಮಾಡಿದೆ.
ಡಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ 10 ಲಕ್ಷ ರೂಪಾಯಿಯನ್ನು ಎನ್ ಟಿಎ ಬಿಡುಗಡೆ ಮಾಡಿದ್ದು, ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೋಡ್ ಹಂಪ್ ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈ ಪ್ರದೇಶದಲ್ಲಿ ಒಂದು ರಾಷ್ಟ್ರೀಯ ಹೆದ್ದಾರಿ ಹಾಗೂ ನಾಲ್ಕು ರಾಜ್ಯ ಹೆದ್ದಾರಿಗಳಿದ್ದು, ಅಪಘಾತಗಳಿಂದಾಗಿ ವನ್ಯ ಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿವೆ. ಚಿರತೆ, ಮುಳ್ಳುಹಂದಿ, ಸಾಂಬಾರ್ ನಂತಹ ಪ್ರಾಣಿಗಳು ಸಾವಿಗೀಡಾಗಿರುವುದು ವರದಿಯಾದರೆ, ಕೆಲವೊಮ್ಮೆ ಕಾಳಿಂಗ ಸರ್ಪ, ಮಾನಿಟರ್ ಹಲ್ಲಿ ಯಂತಹ ಸಣ್ಣ ಪ್ರಾಣಿಗಳು ಅಪಘಾತದಲ್ಲಿ ಮೃತಪಟ್ಟಿರುವುದು ವರದಿಯಾಗುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ರಸ್ತೆ ಅಪಘಾತದಲ್ಲಿ ವನ್ಯ ಜೀವಿಗಳು ಸಾವನ್ನಪ್ಪುವುದನ್ನು ತಡೆಗಟ್ಟಲು ಸ್ಪೀಡ್ ಬ್ರೇಕರ್ ಗಳನ್ನು ನಿರ್ಮಿಸಲು 10 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
Advertisement