ನಾಪತ್ತೆಯಾದ ವಾಯುಸೇನೆ ವಿಮಾನಕ್ಕಾಗಿ ತೀವ್ರ ಶೋಧ, ಕಾರ್ಯಾಚರಣೆಗೆ ಎನ್ಡಿಆರ್ಎಫ್

4 ಮಂದಿ ಸಿಬ್ಬಂದಿ ಸೇರಿದಂತೆ ಸುಮಾರು 29 ಮಂದಿ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಸೇನೆಯ ಎಎನ್-32 ವಿಮಾನ ಬಂಗಾಳಕೊಲ್ಲಿಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 4 ಮಂದಿ ಸಿಬ್ಬಂದಿ ಸೇರಿದಂತೆ ಸುಮಾರು 29 ಮಂದಿ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಸೇನೆಯ ಎಎನ್-32 ವಿಮಾನ ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿದ್ದು, ನಾಪತ್ತೆಯಾದ ವಿಮಾನಕ್ಕಾಗಿ ತೀವ್ರ ಶೋಧ ನಡೆಯುತ್ತಿದೆ. 
ಬಂಗಾಳ ಕೊಲ್ಲಿಯಲ್ಲಿ ಚೆನ್ನೈನಿಂದ ಅಂದಾಜು 280 ಕಿಲೋ ಮೀಟರ್ ದೂರದಲ್ಲಿ ವಿಮಾನ ಪತನಗೊಂಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದೀಗ ಬಂಗಾಳ ಕೊಲ್ಲಿ ವ್ಯಾಪ್ತಿಯಲ್ಲಿ ಶೋಧ ಕಾರ್ಯ ಬಿರುಸಿನಿಂದ ಸಾಗಿದ್ದು, ಈಗಾಗಲೇ ಸಾಗರ ತಳದಲ್ಲಿಯೂ ಶೋಧ ಕಾರ್ಯ ನಡೆಸಲು ನೇವಿ ಒಂದು ಜಲಾಂತರ್ಗಾಮಿ ನೌಕೆಯನ್ನು ಕಳುಹಿಸಿದೆ.
ಭಾರತೀಯ ವಾಯು ಸೇನೆ, ನೌಕಾಪಡೆ ಹಾಗೂ ಭಾರತೀಯ ಕರಾವಳಿ ಪಡೆ ಈಗ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಸದ್ಯದಲ್ಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ಡಿಆರ್ಎಫ್) ಸಹ ಕಾರ್ಯಚರಣೆಗೆ ಕೈಜೋಡಿಸಲಿದೆ. ನಾಪತ್ತೆಯಾಗಿರುವ ವಿಮಾನ ಪತ್ತೆ ಸಹಕರಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಎನ್ಡಿಆರ್ಎಫ್ ಗೆ ಸೂಚಿಸಿದ್ದಾರೆ.
ಇಂದು ಬೆಳಗ್ಗೆ 7.30ರ ಸುಮಾರಿಗೆ ಚೆನ್ನೈನ ತಾಂಬರಮ್‌ ಏರ್‌ಬೇಸ್‌ನಿಂದ 29 ಮಂದಿಯನ್ನು ಹೊತ್ತು ಅಂಡಮಾನ್‌ ನಿಕೋಬಾರ್‌ನ ಪೋರ್ಟ್‌ ಬ್ಲೇರ್‌ನತ್ತ ಟೇಕ್ ಆಫ್ ಆಗಿದ್ದ ಎಎನ್-32 ವಿಮಾನ  8.12ರ ಹೊತ್ತಿಗೆ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಬೆಳಗ್ಗೆ 7.30ರಲ್ಲಿ ಟೇಕ್ ಆಫ್ ಆಗಿದ್ದ ವಿಮಾನ ಚೆನ್ನೈನಲ್ಲಿರುವ ನಿಯಂತ್ರಣ ಕೊಠಡಿಯನ್ನು 2 ಬಾರಿ  ಸಂಪರ್ಕಿಸಿತ್ತು. ಬೆಳಗ್ಗೆ 7.46ರಲ್ಲಿ ನಿಯಂತ್ರಣ ಕೊಠಡಿಯ ಸಂಪರ್ಕಿಸಿದ್ದ ವಿಮಾನದ ಸಂಪರ್ಕ ಕಡಿತಗೊಂಡು ಮತ್ತೆ ಸುಮಾರು ಅರ್ಧ ಗಂಟೆ ಬಳಿಕ 8.12ರಲ್ಲಿ ಕೊನೆಯ ಬಾರಿಗೆ ಸಂಪರ್ಕಕ್ಕೆ  ಬಂದಿತ್ತು. ವಿಮಾನದಲ್ಲಿ ನಾಲ್ಕು ಗಂಟೆಗೆ ಸಾಕಾಗುವಷ್ಟು ಇಂಧನವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬಳಿಕ ವಿಮಾನವನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲ್ಲಿಲ್ಲ. ಹೀಗಾಗಿ ಸೇನಾ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗಿದ್ದು, ವಿಮಾನ ಬೆರೆಲ್ಲೂ ಇಳಿದಿರುವ ಕುರಿತು  ಸಮಾಚಾರ ತಿಳಿದಿಲ್ಲ.
ಈ ಮಾಹಿತಿಯಾಧಾರದ ಮೇಲೆ ವಿಮಾನ ಪತನವಾಗಿರಬಹುದು ಎಂದು ಶಂಕಿಸಲಾಗುತ್ತಿದೆ. ಅಲ್ಲದೆ ವಿಮಾನ ಕೊನೆಯ ಬಾರಿಗೆ ನಿಯಂತ್ರಣ ಕೊಠಡಿಯ ಸಂಪರ್ಕಕ್ಕೆ  ಬಂದಾಗ ಬಂಗಾಳ ಕೊಲ್ಲಿಯ ಮೇಲೆ ಹಾರಾಟ ಮಾಡುತ್ತಿತ್ತು. ಈ ಹಿನ್ನಲೆಯಲ್ಲಿ ವಿಮಾನ ಬಂಗಾಳಕೊಲ್ಲಿಯಲ್ಲೇ ಬಿದ್ದಿರಬಹುದು ಎಂಬ ಶಂಕೆಯ ಮೇರೆಗೆ ಸೇನಾ ವಿಮಾನಗಳು ಬಂಗಾಳಕೊಲ್ಲಿಯಲ್ಲಿ ಶೋಧ ಕಾರ್ಯ ಆರಂಭಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com