ವಿಶಾಖಪಟ್ಟಣಂ: ನೌಕಾಪಡೆ ಶಸ್ತ್ರಾಸ್ತ್ರ ಡಿಪೋ (ಎನ್ ಎ ಡಿ) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆ (ಐ ಎ ಎಫ್) ವಿಮಾನ ಬಂಗಾಳ ಕೊಲ್ಲಿಯಲ್ಲಿ ಶುಕ್ರವಾರ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಕೆಲವು ಪ್ರಯಾಣಿಕರ ಕೌಟುಂಬಿಕ ಸದಸ್ಯರನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಶನಿವಾರ ಭೇಟಿ ಮಾಡಿದ್ದಾರೆ.
ಎನ್ ಚಿನ್ನಾ ರಾವ್ ಮತ್ತು ಪಿ ನಾಗೇಂದ್ರ ರಾವ್ ಅವರ ಮನೆಗಳಿಗೆ ಭೇಟಿ ನೀಡಿದ ನಾಯ್ಡು ಕುಟುಂಬ ಸದಸ್ಯರನ್ನು ಸಂತೈಸಿದ್ದಾರೆ. ವಿಮಾನವನ್ನು ಪತ್ತೆಹಚ್ಚಲು ಭದ್ರತಾ ಅಧಿಕಾರಿಗಳು ಕೈಮೀರಿ ಪ್ರಯತ್ನಿಸುತ್ತಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
ಚೆನ್ನೈನ ತಂಬಾರಾಮ್ ವಾಯುಪಡೆ ನೆಲೆಯಿಂದ ಮೇಲೇರಿದ ಕ್ಷಣದಲ್ಲೇ ನಾಪತ್ತೆಯಾದ ಎಎನ್-32 ವಿಮಾನದಲ್ಲಿ ಚಲಿಸುತ್ತಿದ್ದ 29 ಪ್ರಯಾಣಿಕರಲ್ಲಿ ವಿಶಾಖಪಟ್ಟಣಂನ ಎನ್ ಎ ಡಿ ಸಂಸ್ಥೆಯ ಎಂಟು ಸಿಬ್ಬಂದಿಗಳು ಸೇರಿದ್ದರು.
ಪೋರ್ಟ್ ಬ್ಲೇರ್ ನೆಡೆಗೆ ಐ ಎ ಎಫ್ ವಿಮಾನ ತೆರಳುತ್ತಿತ್ತು. ಐ ಎನ್ ಎಸ್ ಬತ್ತಿಮಾಲ್ವ್ ಹಡಗಿನಲ್ಲಿ ನೌಕಾ ಬಂಧೂಕು ( ಸಿ ಆರ್ ಎನ್ -91) ರಿಪೇರಿ ಮತ್ತು ನಿರ್ವಹಣಾ ಕೆಲಸಕ್ಕಾಗಿ ಎನ್ ಎ ಡಿ ತಂತ್ರಜ್ಞರು ವಿಮಾನದಲ್ಲಿದ್ದರು.
ವಿ ಸಾಂಬಾ ಮೂರ್ತಿ, ನಾಗೇಂದ್ರ ರಾವ್, ಆರ್ ವಿ ಪ್ರಸಾದ್ ಬಾಬು, ಪಿ ಚಂದ್ರ ಸೇನಾಪತಿ, ಚರಣ್ ಮಹಾರಾಣಾ, ಚಿನ್ನಾ ರಾವ್, ಜಿ ಶ್ರೀನಿವಾಸ್ ರಾವ್ ಹಾಗೂ ಭೂಪೇಂದ್ರ ಸಿಂಗ್ ವಿಮಾನದಲ್ಲಿದ್ದ ಎನ್ ಎ ಡಿ ಸಿಬ್ಬಂದಿಗಳು ಎಂದು ತಿಳಿದುಬಂದಿದೆ.
ಭದ್ರತಾ ಸಚಿವ ಮನೋಹರ್ ಪರ್ರಿಕರ್ ಹಾಗೂ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ ನಾಯ್ಡು, ಕಾಣೆಯಾದ ವಿಮಾನವನ್ನು ಪತ್ತೆ ಹಚ್ಚಲು ಕ್ರಮ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದರು ಎಂದು ಹೇಳಿದ್ದಾರೆ.
"ಇದು ದುರದೃಷ್ಟಕರ ಘಟನೆ. ಪತ್ತೆ ಹಚ್ಚಲು ಶ್ರಮವಹಿಸಲಾಗಿದೆ. ನಮಗೆ ಮಾಹಿತಿ ಸಿಕ್ಕ ಕ್ಷಣ ಕುಟುಂಬಗಳೊಂದಿಗೆ ಹಂಚಿಕೊಳ್ಳಲಿದ್ದೇವೆ" ಎಂದು ಅವರು ವರದಿಗಾರರಿಗೆ ಹೇಳಿದ್ದಾರೆ.
ಈ ಕಷ್ಟದ ಪರಿಸ್ಥಿತಿಯಲ್ಲಿ ಕುಟುಂಬಗಳ ಬೆನ್ನಿಗೆ ಸರ್ಕಾರ ನಿಂತು ಎಲ್ಲ ಸಹಾಯವನ್ನು ಮಾಡುವ ಭರವಸೆ ನೀಡಿದ್ದಾರೆ ನಾಯ್ಡು. ಚಿನ್ನಾ ರಾವ್ ಮತ್ತು ನಾಗೇಂದ್ರ ರಾವ್ ಇಬ್ಬರು ಬಡ ಕುಟುಂಬಗಳಿಂದ ಬಂದವರು ಎಂದು ತಿಳಿಸಿದ ಅವರು, ನಾಗೇಂದ್ರ ರಾವ್ ತಂದೆ ತಿಂಡಿ ತಿನಿಸುಗಳನ್ನು ಮಾರಾಟ ಮಾಡಿ ಮಗನ ವಿದ್ಯಾಭ್ಯಾಸ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.