ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್
ಪ್ರಧಾನ ಸುದ್ದಿ
ಬಿಜೆಪಿ-ಬಿ ಎಸ್ ಪಿ ನಡುವೆ ವಾಕ್-ಸಮರ ದುರದೃಷ್ಟಕರ: ಅಖಿಲೇಶ್
ಬಹುಜನ ಸಮಾಜವಾದಿ ಪಕ್ಷ (ಬಿ ಎಸ್ ಪಿ) ಮತ್ತು ಭಾರತೀಯ ಜನತಾ ಪಕ್ಷಗಳ (ಬಿಜೆಪಿ) ನಡುವೆ ನಡೆಯುತ್ತಿರುವ ವಾಕ್-ಸಮರದ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೌನ
ಲಖನೌ: ಬಹುಜನ ಸಮಾಜವಾದಿ ಪಕ್ಷ (ಬಿ ಎಸ್ ಪಿ) ಮತ್ತು ಭಾರತೀಯ ಜನತಾ ಪಕ್ಷಗಳ (ಬಿಜೆಪಿ) ನಡುವೆ ನಡೆಯುತ್ತಿರುವ ವಾಕ್-ಸಮರದ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೌನ ಮುರಿದಿದ್ದು ಇದು ದುರದೃಷ್ಟಕರ ಸಂಗತಿ ಎಂದಿದ್ದಾರೆ.
ತಮ್ಮ ಅಧಿಕೃತ ನಿವಾಸದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ನಡುವೆ ಮಾತನಾಡಿದ ಅವರು ಬಿಜೆಪಿ ನಾಯಕ ದಯಾ ಶಂಕರ್, ಬಿ ಎಸ್ ಪಿ ಮುಖ್ಯಸ್ಥೆ ಮಾಯಾವತಿ ಬಗೆಗೆ ಹೇಳಿದ ಮಾತುಗಳು ಆಕ್ಷೇಪಣೀಯ ಆದರೆ ಅದೇ ಸಮಯದಲ್ಲಿ ಬಿ ಎಸ್ ಪಿ ನಾಯಕರು ಮತ್ತು ಕಾರ್ಯಕರ್ತರು ದಯಾಶಂಕರ್ ಕುಟುಂಬ ವರ್ಗದ ಮೇಲೆ ಮಾಡಿದ ವಾಕ್-ದಾಳಿ ಇನ್ನೂ ಹೆಚ್ಚಿನ ನೋವುಂಟು ಮಾಡಿದೆ ಎಂದಿದ್ದಾರೆ.
"ಯಾವುದೇ ಸಂವಾದದಲ್ಲಿ ಶಿಷ್ಟತೆ ಬಹಳ ಮುಖ್ಯ ಎಂದು ನಂಬಿರುವ ನಗರದಲ್ಲಿ ಇವೆಲ್ಲ ನಡೆಯುತ್ತಿರುವುದು ದುರದೃಷ್ಟಕರ ಮತ್ತು ರಾಜಕೀಯ ಕ್ಷೇತ್ರದಲ್ಲಿರುವ ಮುಖಂಡರು ಸಾರ್ವಜನಿಕ ಮಾತುಕತೆಯಲ್ಲಿ ತಾವು ಬಳಸುವ ಭಾಷೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ಅವರು ಹೇಳಿದ್ದಾರೆ.
ಎರಡು ಬಾರಿ ಮೈತ್ರಿ ಪಕ್ಷಗಳಾಗಿದ್ದ ಬಿಜೆಪಿ ಮತ್ತು ಬಿ ಎಸ್ ಪಿ ಪಕ್ಷಗಳ ಬಗ್ಗೆ ಮಾತನಾಡಿ ರಕ್ಷಾಬಂಧನ ಹಬ್ಬ ಹತ್ತಿರವಿದ್ದು ಈ ಎರಡು ಪಕ್ಷಗಳು ವಿವಾದಗಳನ್ನು ಬಗೆಹರಿಸಿಕೊಳ್ಳಲಿ ಎಂದಿದ್ದಾರೆ.
ಎರಡು ಪಕ್ಷದ ಮುಖಂಡರ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ಗಳಲ್ಲಿ ಕಾನೂನು ಎಂದಿನಂತೆ ಕ್ರಮ ತೆಗೆದುಕೊಳ್ಳಲಿದೆ ಎಂದು ಕೂಡ ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ