
ನವದೆಹಲಿ: ಎಎಪಿ ಶಾಸಕನನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮೋದಿ 'ತುರ್ತು ಪರಿಸ್ಥಿತಿ'ಯಂತಹ ವಾತಾವರಣ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದಾರೆ.
"ಮೋದಿ ದೆಹಲಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಬಂಧನ, ದಾಳಿ, ಭಯೋತ್ಪಾದನೆ, ದೆಹಲಿ ಆಯ್ಕೆ ಮಾಡಿರುವ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
"ಟಿವಿ ವಾಹಿನಿಗಳ ಕ್ಯಾಮರಾಗಳ ಮುಂದೆಯೇ, ಅವರ ಪತ್ರಿಕಾ ಗೋಷ್ಠಿಯಲ್ಲೇ ದಿನೇಶ್ ಮೊಹಾನಿಯಾ ಅವರನ್ನು ಬಂಧಿಸಿದ್ದಾರೆ. ಮೋದಿ ಎಲ್ಲರಿಗೂ ಯಾವ ಸಂದೇಶ ನೀಡಲು ಹೊರಟಿದ್ದಾರೆ" ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.
ದೆಹಲಿಯ ಹಿರಿಯ ನಾಗರಿಕರೊಬ್ಬರ ಮೇಲೆ ಕೈಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಪ್ರಶ್ನಿಸಲು ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಶಾಸಕ ಮೊಹಾನಿಯಾ ಅವರನ್ನು ಪತ್ರಿಕಾ ಗೋಷ್ಠಿಯ ವೇಳೆಯಲ್ಲಿ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿವಾಸಿಗಳ ವಿರುದ್ಧ ಸ್ವಯಂಪ್ರೇರಿತ ದಾಳಿ, ಅನುಚಿತ ವರ್ತನೆ ಮತ್ತು ಹಾನಿ ಆರೋಪಿಗಳಿಂದ ದೆಹಲಿ ಪೊಲೀಸರು ಶಾಸಕನ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ನೀರಿನ ವ್ಯತ್ಯಯದ ಬಗ್ಗೆ ಪ್ರಶ್ನಿಸಿದ್ದಾಗ ಮೊಹಾನಿಯಾ ತಮ್ಮ ಕಪಾಳಕ್ಕೆ ಹೊಡೆದು ಕೆಳಗೆ ತಳ್ಳಿದರು ಎಂದು ತುಘಲಖಾಬಾದ್ ನಿವಾಸಿ 60 ವರ್ಷದ ರಾಕೇಶ್ ಕುಮಾರ್ ಶಾಸಕನ ವಿರುದ್ಧ ದೂರು ಸಲ್ಲಿಸಿದ್ದಾರೆ. ಎರಡು ದಿನಗಳ ಹಿಂದೆ ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತನೆ ತೋರಿದ್ದ ಆರೋಪದ ಮೇಲೆ ಮೊಹಾನಿಯಾ ಸಾಕಷ್ಟು ವಿರೋಧಕ್ಕೆ ಗುರಿಯಾಗಿದ್ದರು.
Advertisement