ಆಪ್ ಜಾಹಿರಾತು ಬಜೆಟ್ ಪ್ರಧಾನಿ ಉಡುಪುಗಳ ಖರ್ಚಿಗಿಂತಲೂ ಕಡಿಮೆ: ಕೇಜ್ರಿವಾಲ್

ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಉಡುಪುಗಳ ಮೇಲೆ ವ್ಯಯಿಸಿರುವ ಮೊತ್ತಕ್ಕೂ ಕಡಿಮೆ ಎಎಪಿ ಸರ್ಕಾರದ ಜಾಹಿರಾತು ಬಜೆಟ್ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ಪಣಜಿ: ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಉಡುಪುಗಳ ಮೇಲೆ ವ್ಯಯಿಸಿರುವ ಮೊತ್ತಕ್ಕೂ ಕಡಿಮೆ ಎಎಪಿ ಸರ್ಕಾರದ ಜಾಹಿರಾತು ಬಜೆಟ್ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದು ಕೇಂದ್ರ ಸರ್ಕಾರ ಮತ್ತು ಕೆಲವು ಮಾಧ್ಯಮಗಳ ಮೇಲೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ. 
ಪ್ರಧಾನಿ ತಾವು ಒಮ್ಮೆ ಧರಿಸುವ ಬಟ್ಟೆಯನ್ನು ಮತ್ತೆ ಧರಿಸುವುದೇ ಇಲ್ಲ ಮತ್ತು ಅವರ ಪ್ರತಿ ಉಡುಪಿನ ಬೆಲೆ 2 ಲಕ್ಷ ಎಂದಿದ್ದಾರೆ ಕೇಜ್ರಿವಾಲ್. 
"ನಾವು 526 ಕೋಟಿಯನ್ನು ಜಾಹಿರಾತಿನ ಮೇಲೆ ವ್ಯಯಿಸಿದ್ದೇವೆ ಎಂದು ಹೇಳಲಾಗುತ್ತಿದೆ. ಇದು ಸಂಪೂರ್ಣ ಸುಳ್ಳು. ನಾವು ಇಲ್ಲಿಯವರೆಗೆ 76 ಕೋಟಿ ವೆಚ್ಚದ ಜಾಹಿರಾತು ಬಿಡುಗಡೆ ಮಾಡಿದ್ದೇವೆ. ಅಷ್ಟೇ. ದೆಹಲಿ ಸರ್ಕಾರದ ಎಲ್ಲ ಇಲಾಖೆಗಳ ಜಾಹಿರಾತು ವೆಚ್ಚ ಪ್ರಧಾನಿ ಮೋದಿ ಅವರ ಉಡುಪುಗಳ ಖರ್ಚಿಗೂ ಕಮ್ಮಿ" ಎಂದು ಸಂಪಾದಕರೊಂದಿಗೆ ಮಾತುಕತೆಯ ಸಮಯದಲ್ಲಿ ಕೇಜ್ರಿವಾಲ್ ಹೇಳಿದ್ದಾರೆ. 
"ನಾನು ನಿಮಗೆ ಆಯವ್ಯಯದ ಮಾಹಿತಿ ಕೊಡಬಲ್ಲೆ. ಮೋದಿ ಅವರು ಒಮ್ಮೆ ತೊಡುವ ಉಡುಪಿನ ಬೆಲೆ 2 ಲಕ್ಷ ರು. ಅವರು ದಿನಕ್ಕೆ ಐದು ಬಾರಿ ಬಟ್ಟೆ ಬದಲಾಯಿಸುತ್ತಾರೆ. ಅಂದರೆ ಅದರ ವೆಚ್ಚ 10 ಲಕ್ಷ. ಅವರು ಎಂದಿಗೂ ತೊಟ್ಟ ಬಟ್ಟೆಯನ್ನು ಮತ್ತೆ ತೊಡುವುದಿಲ್ಲ. ಅವುಗಳನ್ನು ಒಗೆದು ಮತ್ತೆ ಉಡುವುದಿಲ್ಲ" ಎಂದು ಮೋದಿ ಅವರ ಉಡುಗೆತೊಡುಗೆಯ ವೆಚ್ಚದ ಮಾಹಿತಿ ನೀಡಿದ್ದಾರೆ. 
"ಇದಕ್ಕೆ ಪ್ರಮಾಣ ಇಲ್ಲಿದೆ ನೋಡಿ. ಗೂಗಲ್ ಗೆ ಹೋಗಿ 'ಮೋದಿ' ಎಂದು ಹುಡುಕಿ. ಅವರು ಒಂದೇ ಬಟ್ಟೆ ಹಾಕಿರುವ ಫೋಟೋಗಳು ಒಂದೇ ಪಟ್ಟಿಯಲ್ಲಿ ಕಾಣಸಿಗುವುದೇ ಇಲ್ಲ. ಅಂದರೆ ಈ ವೆಚ್ಚ ದಿನಕ್ಕೆ 10 ಲಕ್ಷ. ಇಲ್ಲಿಯವರೆಗೂ 700 ದಿನ ಅಧಿಕಾರದಲ್ಲಿದ್ದಾರೆ. ಅಂದರೆ ಇಲ್ಲಿಯವರೆಗೂ ಅವರ ಉಡುಗೆಯ ಮೇಲೆ 70 ಕೋಟಿ ವ್ಯಯಿಸಿದ್ದಾರೆ, ಇನ್ನುಳಿದ ಬಟ್ಟೆಗಳಿಗೆ ಐದು ಕೋಟಿ" ಎಂದಿದ್ದಾರೆ ಕೇಜ್ರಿವಾಲ್. 
ಬಹುತೇಕ ಮಾಧ್ಯಮಗಳು ಅವರಿಗೆ ಹೆದರಿದ್ದಾರೆ ಅಥವಾ ಅಜ್ಞಾನದಿಂದಿದ್ದಾರೆ ಎಂದು ಕೂಡ ಆರೋಪಿಸಿರುವ ಕೇಜ್ರಿವಾಲ್ "ಮಾಧ್ಯಮಗಳು ಹೆದರಿದ್ದಾರೆ ಅಥವಾ ಅಜ್ಞಾನದಿಂದಿದ್ದಾರೆ. ಎಲ್ಲವೂ ಅಲ್ಲ ಆದರೆ ಬಹುತೇಕ. ಮೋದಿ ಎರಡು ವರ್ಷದ ಅಧಿಕಾರ ಪೂರೈಸಿದ ನಂತರ ಮಾಧ್ಯಮ ವಾಹಿನಿಗಳು ಇಂಡಿಯಾ ಗೇಟ್ ನಿಂದ ಐದು ಘಂಟೆಗಳ ಕಾರ್ಯಕ್ರಮ ಪ್ರಸಾರ ಮಾಡಿವೆ. ಇದು ಹಿಂದೆ ಎಂದಾದರೂ ನಡೆದಿದೆಯೇ? ಅವರು ಅದನ್ನು ಮಾಡಿದ ಮೇಲೆ ನಾವು ಮಾಡುತ್ತಿರುವ ಒಳ್ಳೆಯ ಕೆಲಸವನ್ನೂ ತೋರಿಸಬೇಕಾಗುತ್ತದೆ. ಆದರೆ ಅದನ್ನು ಮಾಡುತ್ತಿಲ್ಲ" ಎಂದು ಕೂಡ ಕೇಜ್ರಿವಾಲ್ ಹೇಳಿದ್ದಾರೆ. 
"ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನೇ ಆಯ್ಕೆ ಮಾಡಿ ಜನರು ನಂಬುವವರೆಗೆ ಅದನ್ನೇ ಪುನರಾವರ್ತಿಸಿ ತೋರಿಸಲಾಗುತ್ತಿದೆ" ಎಂದು ಕೂಡ ಮುಖ್ಯಮಂತ್ರಿ ಹೇಳಿದ್ದಾರೆ. 
ತಮ್ಮ ಪಕ್ಷದ ವಿರುದ್ಧ ಮಾಧ್ಯಮಗಳು ಮಾಡಿದ ಋಣಾತ್ಮಕ ಪ್ರಚಾರದ ಹೊರತಾಗಿಯೂ ಎಎಪಿ ಪಕ್ಷ ದೆಹಲಿ ವಿಧಾನಸಭೆಯಲ್ಲಿ ಜಯಗಳಿಸಿತು ಎಂದು ಕೆಲವು ಮಾಧ್ಯಮಗಳ ಮೇಲೆಯು ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com