ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯುಬ್ಲೋಟ್ ಡೈಮಂಡ್ ವಾಚ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ವಾಚ್ ವಿಚಾರ ಮುಂದಿಟ್ಟುಕೊಂಡು ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಗದ್ದಲ ಬುಧವಾರವೂ ಮುಂದುವರಿದಿದೆ.
ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ದುಬಾರಿ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ಉತ್ತರ ನೀಡಬೇಕೆಂದು ಜೆಡಿಎಸ್ ಪಟ್ಟು ಹಿಡಿಯಿತು. ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಸಹ ವಾಚ್ ಪ್ರಕರಣದ ಬಗ್ಗೆ ನಿಲುವಳಿ ಸೂಚನೆಯಡಿ ವಿಸ್ತ್ರತ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಅಲ್ಲದೇ ಮುಖ್ಯಮಂತ್ರಿಗಳಿಗೆ ವಾಚ್ ನೀಡಿದ ಡಾ.ಗಿರೀಶ್ ಚಂದ್ರ ವರ್ಮಾ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆಯಿತು.
ಏತನ್ಮಧ್ಯೆ ಗದ್ದಲ ಹೆಚ್ಚಾದಾಗ ಸ್ಪೀಕರ್ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿದರು. ಆದರೆ ಸಂಧಾನ ಸಭೆ ವಿಫಲವಾಯಿತು. ನಂತರ ಕಲಾಪ ಆರಂಭವಾದಾಗಲೂ ಬಿಜೆಪಿ, ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.
ವಾಚ್...ವಾಚ್ ಎಲ್ಲಿಂದ ಬಂತು ವಾಚ್...ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಕೋಲಾಹಲದ ನಡುವೆಯೇ ವಿಧಾನಮಂಡಲ ಸದಸ್ಯರು ಸಂಬಳ, ನಿವೃತ್ತಿ ವೇತನ ಕುರಿತ ವಿಧೇಯಕ ಅಂಗೀಕಾರ ಮಾಡಿದರು. ತದನಂತರ ಸ್ಪೀಕರ್ ಕಾಗೋಡು ಕಲಾಪವನ್ನು ಮಧ್ಯಾಹ್ನ 3ಗಂಟೆಗೆ ಮುಂದೂಡಿದರು.
ಇನ್ನೂ ವಿಧಾನ ಪರಿಷತ್ ನಲ್ಲೂ ಈ ವಾಚ್ ವಿವಾದ ಮುಂದುವರೆದಿದ್ದು, ಪ್ರತಿಪಕ್ಷಗಳ ತೀವ್ರ ಕೋಲಾಹಲದಿಂದಾಗಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಮೇಲ್ಮನೆ ಕಲಾಪವನ್ನು ನಾಳೆ ಬೆಳಗ್ಗೆ 11ಗಂಟೆಗೆ ಮುಂದೂಡಿದರು.