ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ತಮಿಳುನಾಡು ಸರ್ಕಾರ ಸಿದ್ಧತೆ
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ 7 ಅಪರಾಧಿಗಳನ್ನು ಬಿಡುಗಡೆ ಮಾಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.
ಅಪರಾಧಿಗಳಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಾಡು ಮಾಡಲಾಗಿತ್ತು. ಕಳೆದ 24 ವರ್ಷಗಳಿಂದ ಏಳು ಅಪರಾಧಿಗಳು ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.
ಸಿಬಿಐ ಪ್ರಕರಣದ ತನಿಖೆಯನ್ನು ನಡೆಸಿರುವುದರಿಂದ ಸಿಆರ್ ಪಿ ಸಿ ಪ್ರಕಾರ ರಾಜ್ಯ ಸರ್ಕಾರ ತನ್ನ ನಿರ್ಧಾರದ ಬಗ್ಗೆ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದೆ. ಏಳು ಅಪರಾಧಿಗಳಿಂದ ಅರ್ಜಿ ಪಡೆದ ನಂತರ ತಮಿಳುನಾಡು ಸರ್ಕಾರ ಅವರನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದೆ. ಎಂದು ತಮಿಳುನಾಡು ಮುಖ್ಯಕಾರ್ಯದರ್ಶಿ ಕೇಂದ್ರ ಗೃಹ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ರಾಜೀವ್ ಗಾಂಧಿ ಹಂತರ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದ ನಂತರ, ಏಳು ಅಪರಾಧಿಗಳನ್ನು ಬಿಡುಗಡೆ ಮಾಡುವುದಾಗಿ ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ 2014 ರ ಫೆ.19 ರಂದು ಘೋಷಿಸಿತ್ತು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ರಾಜೀವ್ ಗಾಂಧಿ ಹತ್ಯೆ ಪ್ರಕರಣವನ್ನು ತನಿಖೆ ನಡೆಸಿರುವ ಸಿಬಿಐ ಕೇಂದ್ರಿಯ ತನಿಖಾ ಸಂಸ್ಥೆಯಾಗಿರುವುದರಿಂದ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದು ಸೂಚಿಸಿತ್ತು.
ತಮಿಳುನಾಡು ಸರ್ಕಾರದ ನಿರ್ಧಾರದ ಬಗ್ಗೆ ಕೇಂದ್ರ ಸರ್ಕಾರ ಮೂರು ದಿನಗಳಲ್ಲಿ ಅಭಿಪ್ರಾಯ ತಿಳಿಸಲು ವಿಫಲವಾದರೆ ಸಿ ಆರ್ ಪಿ ಸಿ ಸೆಕ್ಷನ್ 432 ರ ಪ್ರಕಾರ ತಮಿಳುನಾಡು ಸರ್ಕಾರ ತನ್ನ ನಿರ್ಧಾರದೊಂದಿಗೆ ಮುಂದುವರೆಯಬಹುದಾಗಿದೆ ಎಂದು ಮುಖ್ಯಮಂತ್ರಿ ಜಯಲಲಿತಾ ತಿಳಿಸಿದ್ದರು. ಅಂದಿನ ಯುಪಿಎ ಸರ್ಕಾರ ತಮಿಳುನಾಡು ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರ ಪರಿಣಾಮ ಹಂತಕರ ಬಿಡುಗಡೆ ವಿಚಾರ ಮುಂದೂಡಲ್ಪಟ್ಟಿತ್ತು. ಈಗ ಮತ್ತೆ ತಮಿಳುನಾಡು ಸರ್ಕಾರ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ