
ರಾಯಪುರ: ಚತ್ತೀಸ್ ಘರ್ ನ ರಾಯಪುರದ ಕಮರದಿಹ್ ಪ್ರದೇಶದಲ್ಲಿನ ಚರ್ಚ್ ಒಂದರ ಮೇಲೆ ನೆನ್ನೆ ನಡೆದ ದಾಳಿಯ ಪ್ರಕರಣದಲ್ಲಿ ಕನಿಷ್ಠ ಏಳು ಜನರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ.
ಕಮರದಿಹ್ ಪ್ರದೇಶದ ಚರ್ಚ್ ಮೇಲೆ ಭಜರಂಗ ದಳದ ಸದಸ್ಯರು ದಾಳಿ ಮಾಡಿದ್ದರು ಎಂದು ಆರೋಪಿಸಲಾಗಿರುವ ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದರು. ದಾಳಿಕೋರರು ಪ್ರಾರ್ಥನೆ ವೇಳೆಯಲ್ಲಿ ಅಲ್ಲಿ ನೆರೆದಿದ್ದ ಜನರ ಮೇಲೆ ದಾಳಿ ಮಾಡಿದ್ದಲ್ಲದೆ, ಕೊಠಡಿಯೊಂದನ್ನು ಧ್ವಂಸಗೊಳಿಸಿದ್ದಾರೆ.
ಈಮಧ್ಯೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವಾಲಯದ ರಾಜ್ಯ ಸಚಿವ ಕಿರೇನ್ ರಿಜಿಜು, ಪೊಲೀಸರು ಅಗತ್ಯ ಕ್ರಮ ತೆಗೆದುಕೊಂಡಿದ್ದು, ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.
"ನಾವು ಜಿಲ್ಲಾಡಳಿತದ ಜೊತೆಗೆ ಸಂಪರ್ಕದಲ್ಲಿದ್ದೇವೆ. ತಪಿತಸ್ಥರ ವಿರುದ್ಧ ಅಗತ್ಯ ಕ್ರಮ ಜರುಗಿಸಿ ಶಿಕ್ಷೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ" ಎಂದು ರಿಜುಜು ಹೇಳಿದ್ದಾರೆ.
'ಜೈ ಶ್ರೀರಾಮ್' ಎಂಬ ಘೋಷಣೆ ಕೂಗಿಕೊಂಡು ಬಂದ ಭಜರಂಗದಳದ ಕಾರ್ಯಕರ್ತರು, ಚರ್ಚ್ ಮೇಲೆ ದಾಳಿ ಮಾಡಿದ್ದಲ್ಲದೆ, ಮಹಿಳೆಯರ ಬಟ್ಟೆಗಳನ್ನು ಹರಿದರು ಮತ್ತು ಮಕ್ಕಳಿಗೆ ಥಳಿಸಿದರು ಎಂದು ಚತ್ತೀಸ್ ಘರ್ ಕ್ರಿಶ್ಚಿಯನ್ ಸಂಘದ ಅಧ್ಯಕ್ಷ ಅರುಣ್ ಪನ್ನಲಾಲ್ ಆರೋಪಿಸಿದ್ದಾರೆ.
"ಇಲ್ಲಿ ಜನರನ್ನು ಮತಾಂತರ ಮಾಡುತ್ತಿದ್ದೇವೆ ಎಂದು ಆರೋಪಿಸಿದರು. ಬೈಬಲ್ ಮತ್ತು ಗೋಡೆಯ ಮೇಲಿದ್ದ ಚಿತ್ರಗಳನ್ನು ವಿಕಾರಗೊಳಿಸಿದರು. ಪೊಲೀಸರು ಬಂದು ದಾಳಿಕೋರರು ಬಂದಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ" ಎಂದು ಪನ್ನಲಾಲ್ ಹೇಳಿದ್ದಾರೆ.
ಅಲ್ಪಸಂಖ್ಯಾತ ಮೇಲೆ ಆಗಾಗ್ಗೆ ದಾಳಿ ನಡೆಯುತ್ತಿರುವುದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಕೂಡ ಅವರು ಹೇಳಿದ್ದಾರೆ.
"ಕಳೆದ ಐದು ವಾರಗಳಲ್ಲಿ ಚತ್ತೀಸ್ ಘರ್ ಕ್ರಿಶ್ಚಿಯನ್ನರ ಮೇಲೆ ಮಡೆದ ನಾಲ್ಕನೇ ದಾಳಿ ಇದು. ಈಗ ಎಫ್ ಐ ಆರ್ ದಾಖಲಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಕೂಡ ಪನ್ನಲಾಲ್ ಹೇಳಿದ್ದಾರೆ.
Advertisement