
ನವದೆಹಲಿ: ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಘದವರು ಯಮುನಾ ನದಿಯ ದಂಡೆಯಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ ನಡೆಸಲು ಮುಂದಾಗಿದ್ದು, ಅಲ್ಲಿ ೩೦ ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆಯಿದ್ದು, ಕಾಲ್ತುಳಿತದ ಸಾಧ್ಯತೆ ಇದೆ ಎಂದು ದೆಹಲಿ ಪೊಲೀಸರು ಆತಂಕ ವ್ಯಕ್ತಪಡಿಸಿದ್ದರಿಂದ ಭಾರತೀಯ ಸೇನೆ ಅಲ್ಲಿ ಆಣೆಕಟ್ಟು ಕಟ್ಟಲು ಮುಂದಾಯಿತು ಎಂದು ಭದ್ರತಾ ಸಚಿವ ಮಹೋಹರ್ ಪರ್ರಿಕರ್ ಅವರ ಆಪ್ತ ಮೂಲಗಳು ತಿಳಿಸಿವೆ.
ಇದಕ್ಕಾಗಿ ಆರ್ಟ್ ಆಫ್ ಲಿವಿಂಗ್ ನವರಿಗೆ ಯಾವುದೇ ಶುಲ್ಕ ಹಾಕುವುದಿಲ್ಲ ಏಕೆಂದರೆ ಅದಕ್ಕೆ ತಕ್ಕನಾದ ನೀತಿಯಿಲ್ಲ ಎಂದು ಮೂಲಗಳು ತಿಳಿಸಿವೆ.
ಇನ್ನು ಮುಂದೆ ಇಂತಹ ಕಾರ್ಯಕ್ರಮಗಳಲ್ಲಿ ಸೇನೆ ಭಾಗಿಯಾಗಲು ಹೊಸ ನೀತಿ ರೂಪಿಸಲು ರಕ್ಷಣಾ ಕಾರ್ಯದರ್ಶಿಯವರಿಗೆ ರಕ್ಷಣಾ ಸಚಿವರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕಾರ್ಯಕ್ರಮ ಜರುಗುವ ಸ್ಥಳದಲ್ಲಿ ಯಮುನಾ ನದಿಗೆ ಆರು ಸ್ಥಳಗಳಲ್ಲಿ ಆಣೆಕಟ್ಟು ಕಟ್ಟಲು ಆರ್ಟ್ ಆಫ್ ಲಿವಿಂಗ್ ಸೇನೆಯನ್ನು ಮನವಿ ಮಾಡಿತ್ತಾದರೂ ಮೊದಲಿಗೆ ಸೇನೆ ನಿರಾಕರಿಸಿತ್ತು ಎಂದು ತಿಳಿದಿದೆ. ಆದರೆ ದೆಹಲಿ ಪೊಲೀಸರು ಕಾಲ್ತುಳಿತದ ಕಳವಳ ವ್ಯಕ್ತಪಡಿಸಿದಾಗ ರಕ್ಷಣಾ ಸಚಿವಾಲಯ ಸಹಾಯಕ್ಕೆ ಒಪ್ಪಿಕೊಂಡಿದೆ. "ಈ ನಿಟ್ಟಿನಲ್ಲಿ ಸಚಿವಾಲಯ ಆಣೆಕಟ್ಟು ಕಟ್ಟಲು ಸೇನೆಗೆ ಮನವಿ ಮಾಡಿಕೊಂಡಿದೆ" ಎಂದು ಮೂಲಗಳು ತಿಳಿಸಿವೆ.
ಆರ್ಟ್ ಆಫ್ ಲಿವಿಂಗ್ ನ ಯೋಗ ಗುರು ರವಿಶಂಕರ್ ಈ ಕಾರ್ಯಕ್ರಮ ಆಯೋಜಿಸಿದ್ದು ಮಾರ್ಚ್ ೧೧ ರಿಂದ ೧೩ ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಆಯೋಜನೆಯಿಂದಾಗಿ ಯಮುನಾ ದಂಡೆಯಲ್ಲಿ ಪರಿಸರ ಹಾಳಾಗಿದೆ ಎಂದು ಹಲವಾರು ಪರಿಸರವಾದಿಗಳು ದೂರಿದ್ದರು. ಅಲಲ್ದೆ ಈ ಕೆಲಸಕ್ಕಾಗಿ ಸೇನಾ ನೆರವನ್ನು ತೆಗೆದುಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
Advertisement