
ನವದೆಹಲಿ: ಮಾಹಾರಾಷ್ಟ್ರೇತರರು ಹೊಸದಾಗಿ ನೊಂದಣಿ ಮಾಡಿರುವ ಆಟೋ ರಿಕ್ಷಾಗಳನ್ನು ಸುಟ್ಟು ಹಾಕಿ ಎಂದು ಕರೆ ನೀಡಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂ ಎನ್ ಎಸ್) ಅಧ್ಯಕ್ಷ ರಾಜ್ ಠಾಕ್ರೆಯವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದೆ.
ಠಾಕ್ರೆ ಅವರ ಈ ಹೇಳಿಕೆ ಬೇಜವಾಬ್ದಾರಿತನದ್ದು ಎಂದಿರುವ ಕಾಂಗ್ರೆಸ್ ಮುಖಂಡ ಪಿ ಎಲ್ ಪುನಿಯಾ, ಭಾರತೀಯರ ವಿರುದ್ಧ ಹೀಗೆ ಕೆಟ್ಟದಾಗಿ ಮಾತಾನಾಡುವುದನ್ನು ಖಂಡಿಸಿದ್ದಾರೆ.
"ಎಂ ಎನ್ ಎಸ್ ಅಧ್ಯಕ್ಷ ರಾಜ್ ಠಾಕ್ರೆ ಇಂತಹ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಈಗ ಮರಾಠಿಗರಲ್ಲದವರು ಆಟೋ ರಿಕ್ಷಾ ನೊಂದಣಿ ಮಾಡಿಕೊಂಡರೆ ಅದನ್ನು ಸುಟ್ಟುಹಾಕಿ ಎಂದಿದ್ದಾರೆ. ಇದು ಬೇಜವಾಬ್ದಾರಿ ಹೇಳಿಕೆ. ಒಂದು ಕಡೆ ಅವರು ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತಾರೆ ಮತ್ತೊಂದು ಕಡೆ ಭಾರತೀಯರ ವಿರುದ್ಧವೇ ಮಾತನಾಡುತ್ತಾರೆ. ಅವರೇ ಮರಾಠ ನಾಯಕರು ಎಂದು ತೋರಿಸಿಕೊಳ್ಳಲು ಸ್ಪರ್ದೆಯೊಡ್ಡಿಕೊಂಡಿದ್ದಾರೆ. ಇದು ರಾಜಕೀಯ. ಇದನ್ನು ಖಂಡಿಸಬೇಕು" ಎಂದು ಪುನಿಯಾ ಹೇಳಿದ್ದಾರೆ.
ವರದಿಗಳ ಪ್ರಕಾರ, 'ಮರಾಠಿ ಅಜೆಂಡಾ'ವನ್ನು ಜಾರಿಯಲ್ಲಿಡಲು ಪಕ್ಷದ ಕಾರ್ಯಕರ್ತರಿಗೆ ಬೀದಿಗಿಳಿದು, ಮರಾಠಿಗರಲ್ಲದವರು ಹೊಸದಾಗಿ ನೊಂದಣಿ ಮಾಡಿಕೊಂಡಿರುವ ಆಟೊ ರಿಕ್ಷಾಗಳನ್ನು ಸುಡಲು ಠಾಕ್ರೆ ಕರೆಕೊಟ್ಟಿದ್ದಾರೆ.
ಎಂ ಎನ್ ಎಸ್ ಸ್ಥಾಪನೆಯಾಗಿ ೧೦ ವರ್ಷ ತುಂಬಿದ ಸಮಯದಲ್ಲಿ ಬುಧವಾರ ಮಾತನಾಡಿದ ಅವರು, ಬಿಜೆಪಿ ಮುಂದಾಳತ್ವದ ಸರ್ಕಾರ ನೀಡಿರುವ ೭೦೦೦೦ ಆಟೋ ರಿಕ್ಷಾ ಪರವಾನಗಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೂಡ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರ ಬಜಾಜ್ ಆಟೋ ಸಂಸ್ಥೆಗೆ ಅಕ್ರಮವಾಗಿ ಸಹಕಾರ ನೀಡಿದೆ ಎಂದು ಕೂಡ ಅವರು ಆರೋಪಿಸಿದ್ದಾರೆ.
Advertisement