ನಾಳೆ 5 ಗಂಟೆಯೊಳೆಗೆ ದಂಡ ಕಟ್ಟಿ: ಎನ್ ಜಿಟಿ; ಕಟ್ಟಲ್ಲ, ಜೈಲಿಗೆ ಹೋಗಲು ಸಿದ್ಧ: ರವಿಶಂಕರ್ ಗುರೂಜಿ

ನಾಳೆಯಿಂದ ಮೂರು ದಿನಗಳ ಕಾಲ ನಡೆಯುವ 'ವಿಶ್ವ ಸಾಂಸ್ಕೃತಿಕ ಉತ್ಸವ'ಕ್ಕಾಗಿ ಒಂದು ಪೈಸೆ ದಂಡ ಕಟ್ಟಲ್ಲ. ಬೇಕಾದರೆ...
ರವಿಶಂಕರ್ ಗುರೂಜಿ
ರವಿಶಂಕರ್ ಗುರೂಜಿ
ನವದೆಹಲಿ: ನಾಳೆಯಿಂದ ಮೂರು ದಿನಗಳ ಕಾಲ ನಡೆಯುವ 'ವಿಶ್ವ ಸಾಂಸ್ಕೃತಿಕ ಉತ್ಸವ'ಕ್ಕಾಗಿ ಒಂದು ಪೈಸೆ ದಂಡ ಕಟ್ಟಲ್ಲ. ಬೇಕಾದರೆ ಜೈಲಿಗೆ ಹೋಗುತ್ತೇನೆ ಎಂದು ಕಾರ್ಯಕ್ರಮ ಆಯೋಜಿಸಿರುವ 'ಆರ್ಟ್‌ ಆಫ್ ಲಿವಿಂಗ್‌ ಫೌಂಡೇಶನ್‌ ನ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರು ಗುರುವಾರ ಹೇಳಿದ್ದಾರೆ.
ನಿನ್ನೆ ವಿಶ್ವ ಸಾಂಸ್ಕೃತಿಕ ಉತ್ಸವದಿಂದ ಪರಿಸರ ನಾಶವಾಗುತ್ತದೆ ಎಂದು ಆರೋಪಿಸಿ ಪರಿಸರ ವಾದಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ  ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) , 5 ಕೋಟಿ ರುಪಾಯಿ ದಂಡ ಸೇರಿದಂತೆ ಕೆಲವು ಷರತ್ತಿನೊಂದಿಗೆ ವಿಶ್ವ ಸಾಂಸ್ಕೃತಿಕ ಉತ್ಸವ ನಡೆಸಲು ಹಸಿರು ನಿಶಾನೆ ತೋರಿತ್ತು. ಆದರೆ ದಂಡದ ಮೊತ್ತವನ್ನು ಕಟ್ಟಲು ನಿರಾಕರಿಸಿರುವ ರವಿಶಂಕರ್ ಗುರೂಜಿ ಅವರು, ನ್ಯಾಯಾಧೀಕರಣದ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಮತ್ತು ಈ ಸಂಬಂಧ ತಾವು ಜೈಲಿಗೂ ಹೋಗಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ಆರ್ಟ್‌ ಆಫ್ ಲಿವಿಂಗ್‌ ಫೌಂಡೇಶನ್‌ ಇಂದು ಸಂಜೆ 4 ಗಂಟೆಯೊಳಗೆ ದಂಡದ ಮೊತ್ತವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಟ್ಟುವಲ್ಲಿ ವಿಫಲವಾದರೆ ಸಾಂಸ್ಕೃತಿಕ ಉತ್ಸವಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆಯುವುದಾಗಿ ಎನ್ ಜಿಟಿ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು. ಆದರೆ ಇಂದು ಮತ್ತೆ ಒಂದು ದಿನ ಕಾಲಾವಕಾಶ ನೀಡಿರುವ ನ್ಯಾಯಾಧೀಕರಣ, ನಾಳೆ 5 ಗಂಟೆಯೊಳಗೆ ದಂಡ ಕಟ್ಟುವಂತೆ ಸೂಚಿಸಿದೆ.
ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ಜೈಲಿಗೆ ಬೇಕಾದರೆ ಹೋಗುತ್ತೇವೆ, ಆದರೆ ಒಂದು ಪೈಸೆ ದಂಡ ಪಾವತಿಸುವುದಿಲ್ಲ ಎಂದು ನ್ಯಾಯಾಧೀಕರಣದ ಆದೇಶಕ್ಕೆ ರವಿಶಂಕರ್ ಗುರೂಜಿ ಸೆಡ್ಡು ಹೊಡೆದಿದ್ದಾರೆ.
ಮಾ.11ರಿಂದ 13ರ ವರೆಗೆ ನಡೆಯಲಿರುವ ಕಾರ್ಯಕ್ರಮಕ್ಕಾಗಿ ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆ ಯಮುನಾ ದಂಡೆಯ ಮೇಲೆ ಬೃಹತ್‌ ವೇದಿಕೆ ಸಿದ್ಧಪಡಿಸಿದ್ದು, ಟೆಂಟ್‌ ಮತ್ತು ರಸ್ತೆಗಳನ್ನು ನಿರ್ಮಾಣ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com