ಹೈದರಾಬಾದ್: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಹಾಗೂ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯ ಅವರ ವಿರುದ್ಧ ಸ್ಥಳೀಯ ಕೋರ್ಟ್ ನಾಲ್ಕು ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ವಿಜಯ್ ಮಲ್ಯ ಅವರು ಜಿಎಂಆರ್ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮಕ್ಕೆ ನೀಡಿದ್ದ ಎರಡು ಕೋಟಿ ರುಪಾಯಿ ಚೆಕ್ ಬೌನ್ಸ್ ಆಗಿದ್ದು. ಈ ಸಂಬಂಧ ಜಿಎಂಆರ್ ಮಲ್ಯ ವಿರುದ್ಧ ಪ್ರಕರಣ ದಾಖಲಿಸಿತ್ತು. ಆದರೆ ಇದುವರೆಗೂ ವಿಚಾರಣೆಗೆ ಹಾಜರಾಗದ ವಿಜಯ್ ಮಲ್ಯ ಹಾಗೂ ಹಾಗೂ ಕಿಂಗ್ ಫಿಶರ್ ಏರ್ ಲೈನ್ಸ್ ನ ಮುಖ್ಯ ಹಣಕಾಸು ಅಧಿಕಾರಿ ವಿರುದ್ಧ 11ನೇ ಎರಾಮಂಜಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ನ್ಯಾಯಾಧಿಶ ರಂಜೋಜಿ ಅವರು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದಾರೆ.
ಜಾಮೀನು ರಹಿತ ವಾರಂಟ್ ಗಳನ್ನು ಜಾರಿ ಮಾಡಿರುವ ಕೋರ್ಟ್, ಮಲ್ಯ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಸಿಎಫ್ಓ ಅವರನ್ನು ಮಾರ್ಚ್ 29ರಂದು ಕೋರ್ಟಿನಲ್ಲಿ ಹಾಜರು ಪಡಿಸುವಂತೆ ಪೊಲೀಸರಿಗೆ ಆದೇಶಿಸಿದೆ.
50 ಲಕ್ಷ ರುಪಾಯಿ ಒಟ್ಟು 2 ಕೋಟಿ ರುಪಾಯಿ ಮೊತ್ತದ ನಾಲ್ಕು ಚೆಕ್ ಗಳು ಬೌನ್ಸ್ ಆಗಿದ್ದು, ಈ ಸಂಬಂಧ ಕೋರ್ಟ್ ನಾಲ್ಕು ಜಾಮೀನು ರಹಿತ ವಾರಟ್ ಜಾರಿ ಮಾಡಿದೆ ಎಂದು ಕೋರ್ಟ್ ಗೆ ವಿಚಾರಣೆಗೆ ಹಾಜರಾಗಿದ್ದ ವಿಜಯ್ ಮಲ್ಯ ಪರ ವಕೀಲ ಎಚ್ ಸುಧಾಕರ್ ರಾವ್ ಅವರು ತಿಳಿಸಿದ್ದಾರೆ.
ಈ ಹಿಂದೆ ಹೈದರಾಬಾದ್ ಕೋರ್ಟ್ ಕೂಡ ಉದ್ಯಮಿ ಮಲ್ಯಗೆ ನಾನ್ ಬೇಲಬಲ್ ವಾರಂಟ್ ನೀಡಿತ್ತು. ಕಿಂಗ್ಫಿಷರ್ ಏರ್ಲೈನ್ಸ್ ನೀಡಿದ ಚೆಕ್ ಬೌನ್ಸ್ ಆಗಿರುವ ಹಿನ್ನೆಲೆಯಲ್ಲಿ ಜಿಎಂಆರ್ ಗ್ರೂಪ್ ನೀಡಿದ ದೂರಿನ ಮೇಲೆ ಹೈದರಾಬಾದ್ ಕೋರ್ಟ್ ವಾರಂಟ್ ಜಾರಿ ಮಾಡಿದೆ.