ವಿಜಯ್ ಮಲ್ಯರ ಖಾಸಗಿ ವಿಮಾನ ಹರಾಜಿಗೆ ಸರ್ಕಾರ ನಿರ್ಧಾರ

ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ರು. 812 ಕೋಟಿ ಸೇವಾ ತೆರಿಗೆಯನ್ನು ಮಲ್ಯ ಇದುವರೆಗೆ ಪಾವತಿಸಿಲ್ಲ. ಇದರಲ್ಲಿ ಬಡ್ಡಿ ಮತ್ತು ದಂಡವೂ ಸೇರಿದ್ದು, ಈ ಮೊತ್ತವನ್ನು ವಸೂಲಿ...
ವಿಜಯ್ ಮಲ್ಯ
ವಿಜಯ್ ಮಲ್ಯ
ನವದೆಹಲಿ: ಬ್ಯಾಂಕ್‌ಗಳು ಮಾತ್ರವಲ್ಲ ಈಗ ಸರ್ಕಾರ ಕೂಡಾ ವಿಜಯ್ ಮಲ್ಯ ಅವರ ಬೆನ್ನ ಹಿಂದೆ ಬಿದ್ದಿವೆ. ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ರು. 812 ಕೋಟಿ ಸೇವಾ ತೆರಿಗೆಯನ್ನು ಮಲ್ಯ ಇದುವರೆಗೆ ಪಾವತಿಸಿಲ್ಲ. ಇದರಲ್ಲಿ ಬಡ್ಡಿ ಮತ್ತು ದಂಡವೂ ಸೇರಿದ್ದು, ಈ ಮೊತ್ತವನ್ನು ವಸೂಲಿ ಮಾಡುವುದಕ್ಕಾಗಿ ವಿಜಯ್ ಮಲ್ಯ ಅವರ ಆಸ್ತಿಯನ್ನು ಹರಾಜು ಹಾಕಲು ಸರ್ಕಾರ ಚಿಂತನೆ ನಡೆಸಿದೆ. ಈ ಆಸ್ತಿಗಳ ಪಟ್ಟಿಯಲ್ಲಿ ಮಲ್ಯ ಅವರ ಖಾಸಗಿ ಏರ್‌ಬಸ್ ಎಸಿಜೆ 319 ವಿಮಾನ ಕೂಡಾ ಇದೆ.  ರು. 812 ಕೋಟಿಯಲ್ಲಿ ರು.32 ಕೋಟಿ ಕಿಂಗ್‌ಫಿಶರ್ ಏರ್‌ಲೈನ್ಸ್  ಸರ್ಕಾರಕ್ಕೆ ಪಾವತಿ ಮಾಡಬೇಕಾಗಿತ್ತು.
ಇದಲ್ಲದೆ 5 ಪುಟ್ಟ ಎಟಿಆರ್ ವಿಮಾನಗಳು, ಮೂರು ಹೆಲಿಕಾಪ್ಟರ್‌ಗಳನ್ನೂ ಹರಾಜು ಮಾಡಲು ಸರ್ಕಾರ ತೀರ್ಮಾನಿಸಿದೆ. 2012ರಲ್ಲಿ ಸೇವೆ ಸ್ಥಗಿತಗೊಳಿಸಿರುವ ಕಿಂಗ್ ಫಿಶರ್ ಏರ್‌ಲೈನ್ಸ್ ಬ್ಯಾಂಕುಗಳಿಗೆ ಒಟ್ಟು ರು. 9000 ಕೋಟಿಯನ್ನು ನೀಡಬೇಕಾಗಿದೆ. ಇದೀಗ ವಿಮಾನಗಳನ್ನು ಸೇವಾ ತೆರಿಗೆ ವಿಭಾಗ ವಶ ಪಡಿಸಿಕೊಂಡಿದ್ದು, ಹರಾಜು ಪ್ರಕ್ರಿಯೆಗಳಿಗೆ ಸಿದ್ಧತೆ ನಡೆಸಲಾಗುವುದು ಎಂದು ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಆ್ಯಂಡ್ ಕಸ್ಟಮ್ಸ್ (CBEC)  ಅಧಿಕಾರಿಗಳು ಹೇಳಿದ್ದಾರೆ.  ಹರಾಜು ಬೆಲೆಯನ್ನು ಸರ್ಕಾರದ ಎಂಎಸ್‌ಟಿಸಿ ಲಿಮಿಟೆಡ್ ತೀರ್ಮಾನ ಕೈಗೊಳ್ಳಲಿದೆ. ಮೇ  15-16 ತಾರೀಖಿನಂದು ಹರಾಜು ಪ್ರಕ್ರಿಯೆ ನಡೆಯಲಿದೆ.
ಅದೇ ವೇಳೆ ಮಲ್ಯ ಅವರ ಖಾಸಗಿ ವಿಮಾನವನ್ನು ಗುತ್ತಿಗೆ ನೀಡಲಾಗಿದೆ. ವಿಮಾನದ ಹಕ್ಕು ಸ್ಥಾಪಿಸಿ ಇಲ್ಲಿವರೆಗೆ ಯಾರೂ ಅಧಿಕಾರಿಗಳನ್ನಾಗಲೀ ನ್ಯಾಯಾಲಯವನ್ನಾಗಲೀ ಸಮೀಪಿಸಿಲ್ಲ.
ಸೇವಾ ತೆರಿಗೆ ಪಾವತಿ ಮಾಡದಿರುವುದರಿಂದ ಮಲ್ಯ ಅವರನ್ನು ಬಂಧಿಸಬೇಕೆಂದು ತೆರಿಗೆ ಇಲಾಖೆ ಕಳೆದ ವರ್ಷವೇ ಒತ್ತಾಯಿಸಿತ್ತು. ಆದರೆ ರು. 50 ಲಕ್ಷ ವೈಯಕ್ತಿಕ ಬಾಂಡ್ ನೀಡಿ ಮಲ್ಯ ಈ ಬಂಧನದಿಂದ ಬಚಾವ್ ಆಗಿದ್ದರು. ಅಷ್ಟೇ ಅಲ್ಲದೆ ಮಲ್ಯ ದೇಶ ಬಿಡುವ ಸಾಧ್ಯತೆಗಳಿರುವುದರಿಂದ ಅವರ ಪಾಸ್‌ಪೋರ್ಟ್‌ನ್ನೂ ವಶ ಪಡಿಸಬೇಕೆಂದು ತೆರಿಗೆ ಇಲಾಖೆ ಹೇಳಿತ್ತು. 
ಆದರೆ ಅಗತ್ಯವೆನಿಸಿದಾಗ ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು ಎಂದು ಹೇಳಿ 2015 ಫೆಬ್ರವರಿ 16ರಂದು ನ್ಯಾಯಾಲಯ ತೆರಿಗೆ ಇಲಾಖೆಯ ವಾದವನ್ನು ತಳ್ಳಿ ಹಾಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com