ಸಂಸತ್ ಭವನ
ಪ್ರಧಾನ ಸುದ್ದಿ
ಮನೆ ಖರೀದಿಸುವವರಿಗೆ ಸಿಹಿ ಸುದ್ದಿ, ರಿಯಲ್ ಎಸ್ಟೇಟ್ ವಿಧೇಯಕಕ್ಕೆ ಸಂಸತ್ ಅಂಗೀಕಾರ
ಮನೆ ಖರೀದಿಸುವವರಿಗೊಂದು ಸಿಹಿ ಸುದ್ದಿ. ರಿಯಲ್ ಎಸ್ಟೇಟ್ ವಲಯವನ್ನು ನಿಯಂತ್ರಿಸುವ ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ...
ನವದೆಹಲಿ: ಮನೆ ಖರೀದಿಸುವವರಿಗೊಂದು ಸಿಹಿ ಸುದ್ದಿ. ರಿಯಲ್ ಎಸ್ಟೇಟ್ ವಲಯವನ್ನು ನಿಯಂತ್ರಿಸುವ ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ವಿಧೇಯ-2015 ಅನ್ನು ಲೋಕಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಗಿದೆ.
ಕಳೆದ ವಾರ ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಶೋಷಣೆಗೆ ಒಳಗಾಗುತ್ತಿರುವ ಗ್ರಾಹಕರ ಹಿತ ರಕ್ಷಿಸುವ ಉದ್ದೇಶ ಹೊಂದಿರುವ ಈ ಮಹತ್ವದ ವಿಧೇಯಕಕ್ಕೆ ರಾಜ್ಯಸಭೆ ಅಂಗೀಕಾರ ನೀಡಿತ್ತು. ಇಂದು ಲೋಕಸಭೆಯಲ್ಲೂ ಅಂಗೀಕಾರವಾಗುವ ಮೂಲಕ ಕಾಯ್ದೆಯಾಗಿದೆ.
ಈ ವಿಧೇಯಕ ರಿಯಲ್ ಎಸ್ಟೇಟ್ ನಲ್ಲಿ ಅಕ್ರಮವಾಗಿ ಹಣ ಹೂಡಿಕೆಯಾಗುವುದನ್ನು ತಪ್ಪಿಸಲಿದೆ. ಮನೆ ಅಥವಾ ಅಪಾರ್ಟ್‌ಮೆಂಟ್ ಅನ್ನು ಇಂತಿಷ್ಟೇ ಅವಧಿಯಲ್ಲಿ ಹಸ್ತಾಂತರಿಸುತ್ತೇವೆ ಎಂದು ಆಶ್ವಾಸನೆ ನೀಡುವ ಬಿಲ್ಡರ್‌ಗಳು, ಒಂದು ವೇಳೆ ಗಡುವು ಮೀರಿದಲ್ಲಿ ಗ್ರಾಹಕನಿಗೆ ದಂಡ ಕಟ್ಟಿಕೊಡಬೇಕಾಗುತ್ತದೆ. ಗೃಹ ಸಾಲಕ್ಕೆ ಗ್ರಾಹಕ ಎಷ್ಟು ಬಡ್ಡಿ ಪಾವತಿಸುತ್ತಿರುತ್ತಾನೋ ಆ ಬಡ್ಡಿಯನ್ನು ಉದ್ಯಮಿಯೇ ದಂಡ ರೂಪದಲ್ಲಿ ನೀಡಬೇಕಾಗುತ್ತದೆ ಎಂದು ಈ ಮಸೂದೆ ಹೇಳುತ್ತದೆ.
ನಿಯಮಾವಳಿಗಳನ್ನು ಉಲ್ಲಂಘಿಸುವ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಅಲ್ಲದೆ ಅಕ್ರಮ ಎಸಗುವ ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೂ 1 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ.
ಗ್ರಾಹಕ ಮನೆಯನ್ನು ತನ್ನ ಸುಪರ್ದಿಗೆ ಪಡೆದ ನಂತರವೂ ಅದರಲ್ಲಿ ಏನಾದರೂ ಲೋಪ-ದೋಷಗಳಿದ್ದರೆ ಲಿಖೀತ ರೂಪದಲ್ಲಿ ದೂರು ನೀಡಿ ಒಂದು ವರ್ಷದೊಳಗೆ ದುರಸ್ತಿ ಮಾಡಿಸಿಕೊಳ್ಳಬಹುದು. ಮನೆ/ಫ್ಲ್ಯಾಟ್ ನಿರ್ಮಾಣಕ್ಕೆಂದು ಗ್ರಾಹಕರಿಂದ ಸಂಗ್ರಹಿಸುವ ಹಣದ ಪೈಕಿ ಶೇ.70ರಷ್ಟು ಮೊತ್ತವನ್ನು ಬಿಲ್ಡರ್‌ಗಳು ನಿರ್ದಿಷ್ಟ ಬ್ಯಾಂಕ್ ಖಾತೆ (ಎಸೊðà ಅಕೌಂಟ್)ಯಲ್ಲಿಡಬೇಕು. ಅದನ್ನು ಬೇರೆ ಯೋಜನೆಗಳಿಗೆ ಬಳಸುವಂತಿಲ್ಲ ಎಂದು ವಿಧೇಯಕ ಸ್ಪಷ್ಟಪಡಿಸುತ್ತದೆ. ಇಷ್ಟು ದಿವಸ ಒಂದು ಯೋಜನೆಯ ದುಡ್ಡಿನಲ್ಲಿ ಮತ್ತೂಂದು ಯೋಜನೆಯನ್ನು ಬಿಲ್ಡರ್‌ಗಳು ಕೈಗೆತ್ತಿಕೊಳ್ಳುತ್ತಿದ್ದುದರಿಂದ ಗ್ರಾಹಕರಿಗೆ ಮನೆ ಸಿಗುವುದು ವಿಳಂಬವಾಗುತ್ತಿತ್ತು.
ರಾಜ್ಯ ಮಟ್ಟದಲ್ಲೂ ರಿಯಲ್ ಎಸ್ಟೇಟ್ ನಿಯಂತ್ರ ಪ್ರಾಧಿಕಾರವನ್ನು ಸ್ಥಾಪಿಸಲು ಈ ವಿಧೇಯಕ ನೆರವಾಗಲಿದೆ. ಇದು ಸರ್ಕಾರಿ ಸಂಸ್ಥೆಯಾಗಿರಲಿದ್ದು, ಗ್ರಾಹಕರು ಯಾವುದೇ ದೂರುಗಳನ್ನು ಇಲ್ಲಿಗೆ ಸಲ್ಲಿಸಬಹುದಾಗಿರುತ್ತದೆ.
ಈ ರಿಯಲ್ ಎಸ್ಟೇಟ್ ಮಸೂದೆಯನ್ನು 2013ರಲ್ಲಿ ಅಂದಿನ ಯುಪಿಎ ಸರ್ಕಾರ ಮಂಡಿಸಿತ್ತು. ರಾಜ್ಯಸಭೆ ಈ ಮಸೂದೆಯನ್ನು ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಸಂಸದೀಯ ಸ್ಥಾಯಿ ಸಮಿತಿಗೆ ಹಸ್ತಾಂತರಿಸಲಾಗಿತ್ತು. ಸಮಿತಿ ಶಿಫಾರಸಿನಂತೆ ಎನ್‌ಡಿಎ ಸರ್ಕಾರ 20 ತಿದ್ದುಪಡಿಗಳನ್ನು ತಂದಿದೆ. ಈ ಮಸೂದೆ ಅಂಗೀಕಾರಕ್ಕೆ ಕಾಂಗ್ರೆಸ್ ಕೂಡ ಬೆಂಬಲ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ