ಗುಮ್ನಾಮಿ ಬಾಬಾ ಅವರ ಪೆಟ್ಟಿಗೆಯಲ್ಲಿ ನೇತಾಜಿ ಬೋಸ್‌ರ ಕುಟುಂಬ ಫೋಟೋ ಪತ್ತೆ

ಫೈಜಾಬಾದ್‌ನ ಜಿಲ್ಲಾ ಖಜಾನೆಯಲ್ಲಿರಿಸಿದ್ದ ಗುಮ್ನಾಮಿ ಬಾಬಾ ಅವರ ಪೆಟ್ಟಿಗೆಯನ್ನು ತೆರೆದು ಪರಿಶೋಧನೆ ನಡೆಸಿದಾಗ ಅದರಲ್ಲಿ ನೇತಾಜಿಯವರ ಕುಟುಂಬದ ಫೋಟೋ ಪತ್ತೆಯಾಗಿದೆ.
ಸನ್ಯಾಸಿ ಗುಮ್ನಾಮಿ ಬಾಬಾ - ನೇತಾಜಿ ಸುಭಾಷ್ ಚಂದ್ರ ಬೋಸ್
ಸನ್ಯಾಸಿ ಗುಮ್ನಾಮಿ ಬಾಬಾ - ನೇತಾಜಿ ಸುಭಾಷ್ ಚಂದ್ರ ಬೋಸ್
ಲಕ್ನೋ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೇ ಸನ್ಯಾಸಿ ಗುಮ್ನಾಮಿ ಬಾಬಾ ಆಗಿದ್ದರೇ? ಹೀಗೊಂದು ಪ್ರಶ್ನೆ ಮತ್ತೆ ಎದ್ದಿದೆ. ಉತ್ತರಪ್ರದೇಶದ ಫೈಜಾಬಾದ್ ನ ಜಿಲ್ಲಾ ಖಜಾನೆಯಲ್ಲಿರಿಸಿದ್ದ ಗುಮ್ನಾಮಿ ಬಾಬಾ ಅವರ ಪೆಟ್ಟಿಗೆಯನ್ನು ತೆರೆದು ಪರಿಶೋಧನೆ ನಡೆಸಿದಾಗ ಅದರಲ್ಲಿ ನೇತಾಜಿಯವರ ಕುಟುಂಬದ ಫೋಟೋ ಪತ್ತೆಯಾಗಿದೆ.
ಕುಟುಂಬದ ಚಿತ್ರದೊಂದಿಗೆ ತಮ್ಮ ಹೆತ್ತವರ ಫೋಟೋ ಕೂಡಾ ಪೆಟ್ಟಿಗೆಯಲ್ಲಿ ಪತ್ತೆಯಾಗಿದೆ. 1982 ರಿಂದ 85ರ ವರೆಗೆ ಗುಮ್ನಾಮಿ ಬಾಬಾ ವಾಸಿಸಿದ್ದ ರಾಂ ಭವನ್‌ನ ಮಾಲೀಕರಾದ ಶಕ್ತಿ ಸಿಂಗ್ ಇದನ್ನು ದೃಢೀಕರಿಸಿದ್ದಾರೆ. ಬಾಬಾ ಅವರ ಹೆತ್ತವರ ಫೋಟೋ ಜತೆಗೆ ಕುಟುಂಬದ 22 ಸದಸ್ಯರು ಈ ಫೋಟೋದಲ್ಲಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
1986 ಫೆಬ್ರವರಿ 4 ರಂದು  ನೇತಾಜಿ ಅವರ ಸಹೋದರ ಸುರೇಶ್ ಚಂದ್ರ ಬೋಸ್ ಅವರ ಪುತ್ರಿ ಲಲಿತಾ ಬೋಸ್ ರಾಂ ಭವನ್‌ಗೆ ಭೇಟಿ ನೀಡಿದ್ದರು. ಫೋಟೋದಲ್ಲಿರುವವರನ್ನು ಅವರು ಗುರುತಿಸಿದ್ದಾರೆ. ಅಂದು ಇದನ್ನೆಲ್ಲಾ ರಾಂ ಭವನದಲ್ಲಿ ಭದ್ರವಾಗಿ ಇಡಲಾಗಿತ್ತು ಎಂದು ಸಿಂಗ್ ಹೇಳಿದ್ದಾರೆ. 
ದುರ್ಗಾ ಪೂಜೆಯ ವೇಳೆ ಮತ್ತು ನೇತಾಜಿಯವರ ಜನ್ಮದಿನದಂದು ಐಎನ್‌ಎ ಮಾಜಿ ಇಂಜೆಲಿಜೆನ್ಸ್ ಅಧಿಕಾರಿ ಪಬಿತ್ರಾ ಮೋಹನ್ ರಾಯ್ ಮತ್ತು ಸುನಿಲ್ ಕಾಂತ್ ಗುಪ್ತಾ ಗುಮ್ನಾಮಿ ಬಾಬಾ ಅವರಿಗೆ ಕಳುಹಿಸಿದ ಟೆಲಿಗ್ರಾಮ್‌ಗಳು ಕೂಡಾ ಈ ಪೆಟ್ಟಿಗೆಯಲ್ಲಿ ಪತ್ತೆಯಾಗಿವೆ.
ಇದಕ್ಕಿಂತ ಮೊದಲು ಪರಿಶೋಧನೆ ನಡೆಸಿದಾಗ ಒಂದು ಪೆಟ್ಟಿಗೆಯಲ್ಲಿ ಪುಸ್ತಕಗಳು ಮತ್ತು ಬ್ರಿಟಿಷ್ ನಿರ್ಮಿತ ಇಂಗ್ಲಿಷ್ ಟೈಪ್ ರೈಟರ್ ಪತ್ತೆಯಾಗಿತ್ತು. ಇನ್ನು ಕೆಲವು ಪೆಟ್ಟಿಗಳಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿದಾಗ ಎರಡನೇ ಮಹಾಯುದ್ಧ ಕಾಲದಲ್ಲಿ ಜರ್ಮನಿ ಸೈನಿಕರು ಬಳಸಿದ್ದ ಜರ್ಮನ್ ನಿರ್ಮಿತ ದೂರದರ್ಶಕ ಮತ್ತು ಒಂದು ಟೀ ಸೆಟ್ ಸಿಕ್ಕಿದೆ.
ಒಟ್ಟು 27 ಪೆಟ್ಟಿಗೆಗಳಿದ್ದು, ಇದರಲ್ಲಿರುವ ಎಲ್ಲ ವಸ್ತುಗಳನ್ನು ಪರಿಶೀಲಿಸಿದ ನಂತರ ಅದರ ಮಾಹಿತಿ ಬಹಿರಂಗ ಪಡಿಸುವುದಲ್ಲದೆ ವೀಡಿಯೋ ಚಿತ್ರೀಕರಣವನ್ನೂ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಕೊಲ್ಕತ್ತಾದ ಫಾರೆನ್ಸಿಕ್ ಲ್ಯಾಬ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಗುಮ್ನಾಮಿ ಬಾಬಾ ಅವರ ಹಲ್ಲಿನ ಡಿಎನ್‌ಎ ರಚನೆ ಮತ್ತು ನೇತಾಜಿಯವರ ರಕ್ತದ ಸ್ಯಾಂಪಲ್‌ನಲ್ಲಿ ಸಾಮ್ಯತೆಗಳಿಲ್ಲ ಎಂದು ದೃಢಪಟ್ಟಿತ್ತು.
ಏತನ್ಮಧ್ಯೆ, ನೇತಾಜಿಯವರ ನಾಪತ್ತೆ ವಿಷಯದ ಬಗ್ಗೆ ತನಿಖೆ ನಡೆಸುತ್ತಿರುವ ನ್ಯಾಯಾಧೀಶ ಎಂ.ಕೆ ಮುಖರ್ಜಿ ಸಮಿತಿ ನೇತಾಜಿ ಮತ್ತು ಗುಮ್ನಾಮಿ ಬಾಬಾ ಬೇರೆ ಬೇರೆ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com