ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯ ಶಾಂತಿ ಮತ್ತು ಸಹಜತೆಗೆ ಮರಳಲು ಕ್ರಮ ತೆಗೆದುಕೊಳ್ಳುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ ಹೈದರಾಬಾದ್ ಹೈಕೋರ್ಟ್, ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ಸೈದರಾಬಾದ್ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದೆ.
ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಪೋಲಿಸ್ ಆಯುಕ್ತರಿಗೆ ಎರಡು ವಾರಗಳೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.
ಒಸ್ಮಾನಿಯಾ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಪ್ರಾಂಶುಪಾಲ ಮತ್ತು ಸಹ ಪ್ರಾಧ್ಯಾಪಕ ಗಾಳಿ ವಿನೋದ್ ಕುಮಾರ್ ಈ ಅರ್ಜಿ ಸಲ್ಲಿಸಿದ್ದು, ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ಆಡಳಿತ ಮಂಡಲಿ ಮತ್ತು ಪೋಲೀಸರ ನಡುವೆ ಮಾತುಕತೆ ನಡೆಸಲು ಪ್ರತ್ಯೇಕ ಸಮಿತಿಯೊಂದನ್ನು ರಚಿಸಿ ಈ ಪ್ರಕರಣವನ್ನು ಬಗೆಹರಿಸುವಂತೆ ಕೋರಿದ್ದಾರೆ.
ಈ ಸಮಿತಿಯ ರಚನೆಗೆ ರಾಜ್ಯದ ಕಾನೂನು ಸೇವಾ ಅಧಿಕಾರಿಗಳು ಸಹಾಯ ಮಾಡಬೇಕೆಂದು ಅರ್ಜಿದಾರರು ಕೇಳಿಕೊಂಡಿದ್ದಾರೆ.
ಅಲ್ಲದೆ ವಿದ್ಯಾರ್ಥಿಗಳ ಮತ್ತು ಪ್ರಾಧ್ಯಾಪಕರ ಮೇಲೆ ತೆಗೆದುಕೊಂಡಿರುವ ಕ್ರಮ ಕಾನೂನುವಿರೋಧಿ ಎಂದು ಪರಿಗಣಿಸಬೇಕು ಎಂದು ಅರ್ಜಿದಾರರು ಕೇಳಿಕೊಂಡಿದ್ದಾರೆ. ಅಪ್ಪರಾವ್ ರಜೆಯ ನಂತರ ಉಪಕುಲಪತಿ ಸ್ಥಾನಕ್ಕೆ ಹಿಂದಿರುಗಿದ್ದನ್ನು ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಇದಕ್ಕೆ ಪೊಲೀಸರು ೨೨ ವಿದ್ಯಾರ್ಥಿಗಳು ಮತ್ತು ಇಬ್ಬರು ಉಪನ್ಯಾಸಕರನ್ನು ಬಂಧಿಸಿದ್ದರು. ನಂತರ ಕೋರ್ಟ್ ಸೋಮವಾರ ಇವರೆಲ್ಲರಿಗೂ ಜಾಮೀನು ನೀಡಿತ್ತು.
ವಿದ್ಯಾರ್ಥಿಗಳ ಜೀವದ ಬಗ್ಗೆ ಕಳವಳಗೊಂಡಿರುವುದಾಗಿ ಕೂಡ ಅರ್ಜಿದಾರ ಹೇಳಿದ್ದಾರೆ. ಈ ಅರ್ಜಿಯನ್ನು ಆಲಿಸಿರುವ ನ್ಯಾಯಾಧೀಶ ಚಲ್ಲ ಕೋದಂಡರಾಮ್ ನೋಟಿಸ್ ಜಾರಿ ಮಾಡಿದ್ದಾರೆ.
Advertisement