ತರಗತಿಗಳಿಗೆ ಮರಳಿದ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು

ಜಂಟಿ ಶಿಸ್ತು ಸಮಿತಿ (ಜೆ ಎ ಸಿ) ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ತರಗತಿಗಳಿಗೆ ಹಿಂದಿರುಗುವಂತೆ ಸೂಚಿಸಿರುವುದರಿಂದ ಹೈದರಾಬಾದ್ ಕೆಂದ್ರ ವಿಶ್ವವಿದ್ಯಾಲಯದ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಜಂಟಿ ಶಿಸ್ತು ಸಮಿತಿ (ಜೆ ಎ ಸಿ) ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ತರಗತಿಗಳಿಗೆ ಹಿಂದಿರುಗುವಂತೆ ಸೂಚಿಸಿರುವುದರಿಂದ ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆಯ ಸಂಕೇತವಾಗಿ ಭುಜದ ಮೇಲೆ ನೀಲಿ ಪಟ್ಟಿ ಕಟ್ಟಿ ತರಗತಿಗಳಿಗೆ ಮರಳಿದ್ದಾರೆ.

ಆದರೆ ಮಾರ್ಚ್ ೨೨ ರ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ವಿಶ್ವವಿದ್ಯಾಲಯದ ಉಪನ್ಯಾಸಕರ ಒಂದು ವರ್ಗ ರಜೆಯ ಮೇಲೆ ತೆರಳಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಮಾರು ೪೦ ಉಪನ್ಯಾಸಕರು ವಿಶ್ವವಿದ್ಯಾಲಯದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯವನ್ನು ವಿರೋಧಿಸಿ ಒಂದು ದಿನದ ಗುಂಪು ರಜೆಯ ಮೇಲೆ ತೆರಳಿದ್ದಾರೆ.

ಈ ಪ್ರತಿಭಟನೆ, ರಜೆಯ ನಂತರ ಅಧಿಕಾರ ಮರುಸ್ವೀಕರಿಸಿರುವ ಉಪಕುಲಪತಿ ಪಿ ಅಪ್ಪಾ ರಾವ್ ವಿರುದ್ಧವೂ ಕೂಡ ಎಂದು ಉಪನ್ಯಾಸಕರು ಹೇಳಿದ್ದಾರೆ.

ಅಪ್ಪ ರಾವ್ ಹಿಂದಿರುಗಿರುವುದು, ಶೈಕ್ಷಣಿಕ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದೆ ಎಂದಿರುವ ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಶಿಸ್ತು ಸಮಿತಿ, ಪ್ರತಿಭಟನೆಗಳ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತು ತರಗತಿಗಳನ್ನು ಮುಂದುವರೆಸುವುದಕ್ಕೆ ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರನ್ನು ಕೇಳಿಕೊಂಡಿದೆ.

ಇದು ಸೆಮಿಸ್ಟರ್ ನ ಕೊನೆಯಾಗಿರುವುದರಿಂದ ಹಲವಾರು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎಂದು ೧೪ ವಿದ್ಯಾರ್ಥಿ ಸಂಘಟನೆಗಳನ್ನು ಒಳಗೊಂಡ ಜೆ ಎ ಸಿ ತಿಳಿಸಿದೆ.

"ತರಗತಿಗಳು ನಡೆಯುವಾಗ ಪ್ರತಿಭಟನೆಯನ್ನು ಸೂಚಿಸಲು ಮತ್ತು ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಸೂಚಿಸಲು ನೀಲಿ ಪಟ್ಟಿ ಕಟ್ಟಿಕೊಳ್ಳಲು ನಾವು ಸೂಚಿಸುತ್ತೇವೆ" ಎಂದು ಜೆ ಎ ಸಿ ಹೇಳಿಕೆಯಲ್ಲಿ ತಿಳಿಸಿದೆ.

ದಲಿತ ಸಂಶೋಧಕ ರೋಹಿತ್ ವೇಮುಲಾ ಆತ್ಮಹತ್ಯೆ ಹಿನ್ನಲೆಯಲ್ಲಿ ರಜೆಯಲ್ಲಿ ತೆರಳಿದ್ದ ಉಪಕುಲಪತಿ ಅಪ್ಪಾರಾವ್ ಹಿಂದಿರುಗಿದ್ದು ಹೊಸ ಪ್ರತಿಭಟನೆಗಳಿಗೆ ಎಡೆ ಮಾಡಿಕೊಟ್ಟಿತ್ತು. ಪ್ರತಿಭಟನಾ ನಿರತ ಕೆಲವು ವಿದ್ಯಾರ್ಥಿಗಳು ಅಪ್ಪ ರಾವ್ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಪೊಲೀಸರು ೨೨ ಜನ ವಿದ್ಯಾರ್ಥಿಗಳು ಹಾಗೂ ಇಬ್ಬರು ಉಪನ್ಯಾಸಕರನ್ನು ಬಂಧಿಸಿದ್ದರು. ಸೋಮವಾರ ಈ ಎಲ್ಲರಿಗೂ ಕೋರ್ಟ್ ಜಾಮೀನು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com