ರಾಜ್ಯಸಭಾ ಸದಸ್ಯ ವಿಜಯ್ ಮಲ್ಯ ರಾಜಿನಾಮೆ ಅಂಗೀಕಾರ

ಸಾಲಬಾಧೆಯಿಂದ ದೇಶ ತೊರೆದಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ನೀಡಿದ್ದ ರಾಜಿನಾಮೆಯನ್ನು ಬುಧವಾರ ಅಂಗೀಕರಿಸಲಾಗಿದ್ದು,...
ವಿಜಯ್ ಮಲ್ಯ
ವಿಜಯ್ ಮಲ್ಯ
ನವದೆಹಲಿ: ಸಾಲಬಾಧೆಯಿಂದ ದೇಶ ತೊರೆದಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ನೀಡಿದ್ದ ರಾಜಿನಾಮೆಯನ್ನು ಬುಧವಾರ ಅಂಗೀಕರಿಸಲಾಗಿದ್ದು, ವಜಾ ಅಪಮಾನದಿಂದ ತಪ್ಪಿಸಿಕೊಂಡಿದ್ದಾರೆ.
ರಾಜ್ಯಸಭೆ ಸಭಾಪತಿ ಹಮೀದ್ ಅನ್ಸಾರಿ ಅವರು ವಿಜಯ್ ಮಲ್ಯ ಅವರ ರಾಜಿನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ರಾಜ್ಯಸಭೆಯ ಉಪಸಭಾಪತಿ ಪಿ.ಜೆ.ಕುರಿಯನ್ ಅವರು ಇಂದು ರಾಜ್ಯಸಭೆಗೆ ತಿಳಿಸಿದರು.
ಕಳೆದ ಸೋಮವಾರ ವಿಜಯ್ ಮಲ್ಯ ಅವರ ರಾಜಿನಾಮೆಯನ್ನು ತಿರಸ್ಕರಿಸಿದ್ದ ಸಭಾಪತಿಗಳು, ಕ್ರಮಬದ್ಧವಾಗಿ ರಾಜಿನಾಮೆ ಸಲ್ಲಿಸುವಂತೆ ರಾಜ್ಯಸಭೆ ಕಾರ್ಯದರ್ಶಿಗಳು ಸಾಲದ ದೊರೆಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವಿಜಯ್ ಮಲ್ಯ ಅವರು ಇಂದು ಎರಡನೇ ಬಾರಿ ಕ್ರಮಬದ್ಧವಾಗಿ ರಾಜಿನಾಮೆ ಸಲಿಸಿದ್ದರು. ಅದನ್ನು ಸಭಾಪತಿಗಳು ಅಂಗೀಕರಿಸಿದ್ದಾರೆ.
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ವಿಜಯ್ ಮಲ್ಯ ಅವರ ಸದಸ್ಯತ್ವದ ಅವಧಿ ಜೂನ್ 30ಕ್ಕೆ ಅಂತ್ಯಗೊಳ್ಳಲಿತ್ತು. ಆದರೆ ಮಲ್ಯ ಅವರ ರಾಜ್ಯಸಭಾ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕಳೆದ ರಾಜ್ಯಸಭಾ ನೀತಿ ಸಂಹಿತೆ ಸಮಿತಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸಾಲದ ದೊರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
17 ವಿವಿಧ ಬ್ಯಾಂಕುಗಳಲ್ಲಿ 9000 ಕೋಟಿ ಸಾಲ ಪಡೆದಿರುವ ವಿಜಯ್ ಮಲ್ಯ ಈಗ ವಿದೇಶದಲ್ಲಿ ನೆಲೆಸಿದ್ದಾರೆ. ಸಾಲಮರುಪಾವತಿ ಬಗ್ಗೆ ಮೂರು ಬಾರಿ ನೊಟೀಸ್ ಕಳುಹಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ಅನ್ನು ಸಹ ರದ್ದು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com