ಇಸ್ಲಮಾಬಾದ್: ಮುಸ್ಲಿಂ ವಿರೋಧಿ ನೀತಿಗಳನ್ನು ಕೈಬಿಡುವಂತೆ ಮತ್ತು ದೇಶದಲ್ಲಿ ಬಂಧಿಸಿರುವ ಮುಸ್ಲಿಮರನ್ನು ಬಿಡುಗಡೆ ಮಾಡುವಂತೆ ಅಮೆರಿಕಾದಲ್ಲಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ತೆಹರಿಕ್-ಎ-ತಾಲಿಬಾನ್ (ಪಾಕಿಸ್ತಾನದ ತಾಲಿಬಾನ್ ದಳ) ಆಗ್ರಹಿಸಿದೆ.
"ಅವರು (ಡೊನಾಲ್ಡ್ ಟ್ರಂಪ್) ಭಯೋತ್ಪಾದನೆ ಹೆಸರಿನಲ್ಲಿರುವ ಎಲ್ಲ ಇಸ್ಲಾಮ್ ವಿರೋಧಿ ನೀತಿಗಳನ್ನು ಕೈಬಿಡಬೇಕು ಮತ್ತು ಎಲ್ಲ ಮುಸ್ಲಿಂ ಖೈದಿಗಳನ್ನು ಅದರಲ್ಲೂ ಅಫಿಯ ಸಿದ್ದಿಕಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು" ಎಂದು ತಾಲಿಬಾನ್ ವಕ್ತಾರ ಮೊಹಮದ್ ಖುರಾಸಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿದ್ದಿಕಿ (೮೬) ನರರೋಗಶಾಸ್ತ್ರಜ್ಞ ಬಹಳ ವರ್ಷ ಅಮೆರಿಕಾದಲ್ಲಿ ಬದುಕಿದ್ದವರು. ಅಮೆರಿಕಾ ಸೈನಿಕರನ್ನು ಕೊಲ್ಲುವ ಸಂಚು ಹೂಡಿದ್ದರು ಎಂದು ಆರೋಪಿಸಿ ಅವರನ್ನು ಆಫ್ಘಾನಿಸ್ಥಾನದಲ್ಲಿ ಬಂಧಿಸಲಾಗಿತ್ತು.
ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ನೀಡುತ್ತಿರುವ ಧನ ಸಹಾಯವನ್ನು ಕೂಡ ನಿಲ್ಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
"ಪಾಕಿಸ್ತಾನ ಮೂಡಿ ಬಂದದ್ದೆ ಇಸ್ಲಾಮ್ ಹೆಸರಿನಲ್ಲಿ. ಆದುದರಿಂದ ಅಲ್ಲಿ ಇಸ್ಲಾಮಿಕ್ ಕಾನೂನು ಇರಬೇಕು. ಅವರು ನಮ್ಮನ್ನು ದೊಡ್ಡ ಮಟ್ಟದಲ್ಲಿ ಕೊಲ್ಲುತ್ತಿರುವುದಲ್ಲದೆ, ನಮ್ಮ ಆಸ್ತಿಯನ್ನು ನಾಶ ಮಾಡುತ್ತಿದ್ದಾರೆ" ಎಂದು ಖುರಾಸಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.