ಸಿಎಂ ಸಿದ್ದರಾಮಯ್ಯ, ಪರಮೇಶ್ವರ
ಸಿಎಂ ಸಿದ್ದರಾಮಯ್ಯ, ಪರಮೇಶ್ವರ

ಪೊಲೀಸರಿಗೆ ಭತ್ಯೆ ಭಾಗ್ಯ, ವೇತನ ಬದಲು 2000 ರು. ಭತ್ಯೆ ಹೆಚ್ಚಳ

ರಾಜ್ಯ ಸರ್ಕಾರ ಕೇಳ ಹಂತದ ಪೊಲೀಸ್ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡುವ ಬದಲು "ಭತ್ಯೆ ಹೆಚ್ಚಳ'ದ...
ಬೆಂಗಳೂರು: ರಾಜ್ಯ ಸರ್ಕಾರ ಕೇಳ ಹಂತದ ಪೊಲೀಸ್ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡುವ ಬದಲು "ಭತ್ಯೆ ಹೆಚ್ಚಳ'ದ ಭಾಗ್ಯ ಮಾತ್ರ ನೀಡುವ ಮೂಲಕ ವೇತನ ಹೆಚ್ಚಳ ನಿರೀಕ್ಷೆಯಲ್ಲಿ ಪೊಲೀಸ್ ಕುಟುಂಬಗಳ ನಿರಾಶೆ ಮೂಡಿಸಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಭತ್ಯೆ ಹೆಚ್ಚಳ ಪ್ರಕಟಿಸಿದರು. ಡಿಸೆಂಬರ್‌ 1ರಿಂದ ಶೇ.90ರಷ್ಟು ಪೊಲೀಸರಿಗೆ ಮಾಸಿಕ ಎರಡು ಸಾವಿರ ಹೆಚ್ಚುವರಿ ಭತ್ಯೆ ದೊರೆಯಲಿದೆ ಎಂದು ಹೇಳಿದರು.
ಪೊಲೀಸರ ಭತ್ಯೆ ಹೆಚ್ಚಳವನ್ನು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸದ್ಯ ಶೇ.32ರಷ್ಟು ವೇತನ ಹೆಚ್ಚಳಕ್ಕೆ ನೀಡಿದ್ದ ಶಿಫಾರಸು ಪರಿಗಣಿಸಲು ಸಾಧ್ಯವಿಲ್ಲ, ಕೇವಲ ಒಂದು ಇಲಾಖೆಯ ವೇತನವನ್ನು ಮಾತ್ರ ಹೆಚ್ಚಿಸಲು ಬರುವುದಿಲ್ಲ. ಮುಂದಿನ ವರ್ಷ ವೇತನ ಆಯೋಗ ರಚಿಸುತ್ತೇವೆ. ಎಂದಿದ್ದಾರೆ. 
ಈಗ ಪೊಲೀಸರಿಗೆ ಮಾಸಿಕ ಎರಡು ಸಾವಿರ ರು. ಭತ್ಯೆ ಹೆಚ್ಚಳ ಮಾಡಲಾಗಿದೆ. ನಿರ್ದಿಷ್ಟ ಅವಧಿಯೇ ಇಲ್ಲದೆ ಬಡ್ತಿ ನೀಡುವ ಬದಲು ಪ್ರತಿ 10 ವರ್ಷಗಳಿಗೊಮ್ಮೆ ಪೊಲೀಸರಿಗೆ ಬಡ್ತಿ ನೀಡುವ ತೀರ್ಮಾನ ಕೈಗೊಂಡಿರುವುದಾಗಿ ಹಾಗೂ ಪೊಲೀಸ್‌ ಅಧಿಕಾರಿಗಳ ಮನೆ ಚಾಕರಿ ಮಾಡುವ "ಆರ್ಡರ್ಲಿ' ಪದ್ಧತಿ ರದ್ದು ಮಾಡಿರುವುದು ಸಿಎಂ ತಿಳಿಸಿದರು.
ಪೊಲೀಸರ ಪ್ರಮುಖ ಬೇಡಿಕೆಯಾದ ವೇತನ ಹೆಚ್ಚಳದ ಬಗ್ಗೆ ಸರ್ಕಾರ ಏಕಾಏಕಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಂದಿನ ವರ್ಷ ಜಾರಿಗೆ ಬರುವ ವೇತನ ಆಯೋಗದ ಮುಂದೆ ಈ ಬೇಡಿಕೆ ಮಂಡಿಸಲಿದ್ದೇವೆ. ಬಳಿಕ ಆಯೋಗದ ನಿರ್ಧಾರದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಪ್ರಸ್ತುತ ಪೊಲೀಸರಿಗೆ ನೀಡುತ್ತಿರುವ ಸಮವಸ್ತ್ರ ಭತ್ಯೆಯನ್ನು 100 ರು.ನಿಂದ 500 ರು.ಗೆ ಹೆಚ್ಚಳ ಮಾಡಿದ್ದೇವೆ. ಹೊಸದಾಗಿ 600 ರು. ಅನುಕೂಲ ಭತ್ಯೆ, 1,000 ರು. ರಿಸ್ಕ್ ಭತ್ಯೆ (ಕಠಿಣತಾ ಭತ್ಯೆ) ಸೇರಿ ಪ್ರತಿ ತಿಂಗಳು 2 ಸಾವಿರ ರು. ಹೆಚ್ಚುವರಿ ಭತ್ಯೆ ನೀಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 200 ಕೋಟಿ ರು ಹೊರೆಯಾಗಲಿದೆ ಎಂದು ತಿಳಿಸಿದರು.
ಪೊಲೀಸ್‌ ಸಮಸ್ಯೆ ಇತ್ಯರ್ಥಕ್ಕಾಗಿ ಔರಾದ್ಕರ್‌ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯು ಸೆಪ್ಟೆಂಬರ್‌ ತಿಂಗಳಲ್ಲಿ ವರದಿ ಸಲ್ಲಿಕೆ ಮಾಡಿತ್ತು. ವರದಿ ಆಧರಿಸಿ ಡಿಸೆಂಬರ್‌ನಿಂದಲೇ ಜಾರಿಯಾಗುವಂತೆ ಪೊಲೀಸರಿಗೆ ಸೌಲಭ್ಯ ಕಲ್ಪಿಸುತ್ತಿದ್ದೇವೆ. ಇದರ ಜತೆಗೆ ಪೊಲೀಸ್‌ ಸಿಬ್ಬಂದಿಗೆ ಪ್ರತಿ ಹತ್ತು ವರ್ಷಕ್ಕೊಮ್ಮೆ ಪೇದೆಗಳಿಗೆ ಬಡ್ತಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಪೊಲೀಸರಿಗೆ ಬಡ್ತಿ ಖಾತರಿಯಾಗಿ ಸಿಗಲಿದೆ. ವರ್ಷಾನುಗಟ್ಟಲೆ ಬಡ್ತಿಯಿಂದ ವಂಚಿತರಾಗುವುದಿಲ್ಲ. ಜತೆಗೆ ವರ್ಷಕ್ಕೆ 13 ತಿಂಗಳು ವೇತನ ನೀಡುವುದನ್ನು ಮುಂದುವರಿಸಲಾಗುವುದು ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com