ಶ್ರೀನಗರ: ೧೩೨ ದಿನಗಳಿಂದ ಬಂದ್ ಆಗಿದ್ದ ಕಾಶ್ಮೀರ ಕಣಿವೆ ಶನಿವಾರದಿಂದ ಮತ್ತೆ ಜೀವಂತವಾಗಿ ಚಟುವಟಿಕೆಯಿಂದ ಕೂಡಿದೆ. ರಸ್ತೆಯ ಮೇಲೆ ಹಲವಾರು ವಾಹನಗಳು ಓಡಾಡುತ್ತಿದ್ದು, ಮಾರುಕಟ್ಟೆಗಳು, ಶಾಲೆಗಳು ಮತ್ತು ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.
ನೋಟು ಹಿಂಪಡೆತದ ಬಿಸಿ ತಟ್ಟಿದ್ದರೂ ಶ್ರೀನಗರದ ಮಾರುಕಟ್ಟೆಗಳಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗಾರರು ಭಾಗಿಯಾಗಿದ್ದಾರೆ.
ಇಂದು ಬೆಳಗಿನಿಂದಲೇ ಬಸ್ ಗಳು ಮತ್ತು ಇತರ ಸಾರ್ವಜನಿಕ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಜನರು ತಮ್ಮ ಹಣ ಹಿಂಪಡೆಯಲು ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಸಾಲುಗಟ್ಟುತ್ತಿರುವುದು ಕೂಡ ಸಾಮಾನ್ಯವಾಗಿದೆ.
ಗಲಭೆ ಪ್ರರಾಂಭವಾದಾಗಿಲಿಂದಲೂ ಮೊದಲ ಬಾರಿಗೆ ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಮತ್ತು ಅಂಚೆ ಕಚೇರಿಗಳು ಹಾಜರಿ ಬಹುತೇಕ ಸಂಪೂರ್ಣವಾಗಿದೆ.
ಜುಲೈ ೮ ರಿಂದ ಹಿಜಬುಲ್ ಕಮ್ಯಾಂಡರ್ ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳು ಹತ್ಯೆಗೈದಾಗಿಲಿಂದಲೂ ಪ್ರಾರಂಭವಾಗಿದ್ದ ಹಿಂಸಾಚಾರದಿಂದ ೧೦೦ ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಪ್ರತಿಭಟನೆಗಳನ್ನು ಮುನ್ನಡೆಸುತ್ತಿದ್ದ ಪ್ರತ್ಯೇಕವಾದಿ ನಾಯಕರು ಎರಡು ದಿನಗಳವರೆಗೆ ಪ್ರತಿಭಟನೆಗಳನ್ನು ಹಿಂಪಡೆದಿದ್ದು, ವಾರಾಂತ್ಯದಲ್ಲಿ ಸಾಮಾನ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದ್ದಾರೆ.
ಅಧಿಕಾರಿಗಳು ಕೂಡ ಶನಿವಾರ ಯಾವುದೇ ಪ್ರದೇಶದಲ್ಲಿ ನಿರ್ಬಂಧಗಳನ್ನು ಹೇರಿಲ್ಲ. ಶ್ರೀನಗರದಲ್ಲಿ ಹಲವು ಕಡೆ ವಾಹನ ದಟ್ಟಣೆ ಕೂಡ ಕಂಡುಬಂದಿದೆ.