ಅದ್ದೂರಿ ಮದುವೆ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಐಟಿ ನೋಟಿಸ್

ಇತ್ತೀಚೆಗಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಮಗಳ ಮದುವೆ ಮಾಡಿ ಎಲ್ಲರ...
ಮಗಳ ಮದುವೆ ಮೆರವಣಿಗೆಯಲ್ಲಿ ರೆಡ್ಡಿ
ಮಗಳ ಮದುವೆ ಮೆರವಣಿಗೆಯಲ್ಲಿ ರೆಡ್ಡಿ
ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಮಗಳ ಮದುವೆ ಮಾಡಿ ಎಲ್ಲರ ಹುಬ್ಬೇರಿಸಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸೋಮವಾರ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ
ಇಂದು ಬಳ್ಳಾರಿಯಲ್ಲಿರುವ ಜನಾರ್ದನ ರೆಡ್ಡಿ ಒಡೆತನದ ಒಎಂಸಿ ಹಾಗೂ ಎಎಂಸಿ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ಮಾಡುವ ಮೂಲ ಗಣಿ ದಣಿಗೆ ಶಾಕ್ ನೀಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಇದೀಗ ಅದ್ದೂರಿ ಮದುವೆಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಸುಮಾರು 20 ನಿಮಿಷಗಳ ಕಾಲ ರೆಡ್ಡಿ ಮನೆ ಪರಿಶೀಲನೆ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಬಳಿಕ ಪುತ್ರಿ ಬ್ರಹ್ಮಿಣಿ ವಿವಾಹಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಕೋರಿ ಸುಮಾರು ಮೂರು ಪುಟಗಳ(16 ವಿವಿಧ ಪ್ರಶ್ನೆಗಳನ್ನೊಳಗೊಂಡಿರುವ ನೋಟಿಸ್) ನೋಟಿಸ್ ಅನ್ನು ಜನಾರ್ದನ ರೆಡ್ಡಿಗೆ ನೀಡಲಾಗಿದೆ. ಅಲ್ಲದೆ ಶುಕ್ರವಾರದೊಳಗೆ ನೋಟಿಸ್ ಗೆ ಉತ್ತರ ನೀಡುವಂತೆ ಆದಾಯ ತೆರಿಗೆ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ಕುಮಾರ ವರ್ಮ ಅವರು ರೆಡ್ಡಿಗೆ ಸೂಚನೆ ನೀಡಿದ್ದಾರೆ.
ಮದುವೆಗೆ ಮಾಡಿದ ಒಟ್ಟು ಖರ್ಚಿನ ವಿವರ, ಮದುವೆಯಲ್ಲಿ ಬಳಸಲಾದ ಆಭರಣ, ಬಟ್ಟೆ, ಆಹ್ವಾನ ಪತ್ರಿಕೆ, ಶ್ಯಾಮಿಯಾನ, ಅಡುಗೆ, ಪೋಟೋ ವಿವರ, ವಸತಿ, ಸಾರಿಗೆ, ಧ್ವನಿ–ಬೆಳಕು, ಭದ್ರತೆ, ಹೂವಿನ ಅಲಂಕಾರ, ಪೂಜಾರಿಗೆ ನೀಡಿದ ಖರ್ಚು ಸೇರಿದಂತೆ ವೈಭವಕ್ಕೆ ಬಳಸಿದ ವಿವರ ಹಾಗೂ ಬ್ಯಾಂಕಿನ ವಹಿವಾಟು, ಅತಿಥಿಗಳಿಗೆ ನೀವು ನೀಡಿದ ಮತ್ತು ಪಡೆದ ಉಡುಗೊರೆ ವಿವರ ತಿಳಿಸಬೇಕು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.
ಅದ್ದೂರಿ ಮದುವೆಗೆ ಸೇವೆ ಒದಗಿಸಿದ ಕಂಪನಿಗಳ ಸಮೀಕ್ಷೆ
ಬಿಜೆಪಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮಗಳ ಅದ್ದೂರಿ ಮದುವೆಗೆ ಸೇವೆ ಒದಗಿಸಿದ ಕನಿಷ್ಠ 10 ಕಾರ್ಯಕ್ರಮ ಆಯೋಜನಾ ಸಂಸ್ಥೆಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ನಡೆಸಿದೆ.
ಕಳೆದ ವಾರ ನಡೆದ ರೆಡ್ಡಿಗಳ ಅದ್ದೂರಿ ಮದುವೆಗೆ ಕೇಟರಿಂಗ್ ಮತ್ತು ಮಲ್ಟಿ ಮೀಡಿಯಾ ವ್ಯವಸ್ಥೆ ಸೇರಿದಂತೆ ಇತರೆ ಐಷಾರಾಮಿ ಸೇವೆಗಳನ್ನು ಒದಗಿಸಿದ ಹೈದರಾಬಾದ್ ಮೂಲದ ಏಳು ಸಂಸ್ಥೆಗಳಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದುವೆಗೆ ನೂರಾರು ಕೋಟಿ ರುಪಾಯಿ ಖರ್ಚು ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರೆಡ್ಡಿಯ ಬ್ಯಾಂಕ್ ಖಾತೆ, ಹಣ ನೀಡಿದ ರಸೀದಿ ಹಾಗೂ ಸಂಪರ್ಕಿಸಿದ ವ್ಯಕ್ತಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com