ಸುಪ್ರೀಂ ಕೋರ್ಟ್
ಪ್ರಧಾನ ಸುದ್ದಿ
ಮುಂದಿನ ಆದೇಶದವರೆಗೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿ: ಸುಪ್ರೀಂ ಆದೇಶ
ಮುಂದಿನ ಆದೇಶದವರೆಗೆ ತಮಿಳುನಾಡಿಗೆ ನಿತ್ಯ ಎರಡು ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಮಂಗಳವಾರ ಸುಪ್ರೀಂ ಕೋರ್ಟ್...
ನವದೆಹಲಿ: ಮುಂದಿನ ಆದೇಶದವರೆಗೆ ತಮಿಳುನಾಡಿಗೆ ನಿತ್ಯ ಎರಡು ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಮಂಗಳವಾರ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಕಾವೇರಿ ನ್ಯಾಯಾಧಿಕರಣದ ಐ ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಸೇರಿದಂತೆ ನಾಲ್ಕು ರಾಜ್ಯಗಳು ಸಲ್ಲಿಸಿರುವ ಮೂಲ ಅರ್ಜಿಯ ವಿಚಾರಣೆ ನಡೆಸಿದ ನ್ಯಾಮೂರ್ತಿ ದೀಪಕ್ ಮಿಶ್ರ, ನ್ಯಾ.ಅಮಿತವ್ ರಾಯ್, ನ್ಯಾ.ಎಎಂ ಖಾನ್ವಿಲ್ಕರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಆದೇಶ ನೀಡಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು, ಅಂತಾರಾಜ್ಯ ನದಿ ವಿವಾದ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಮೇಲ್ಮನವಿಗಳ ಅರ್ಜಿ ವಿಚಾರಣೆ ಕೋರ್ಟ್ ಮಾಡಬಹುದೇ? ಈ ರೀತಿಯ ಮೂಲಭೂತ ಪ್ರಶ್ನೆಗಳಿಗೆ ಈಗ ಉತ್ತರ ಸಿಗಬೇಕಿದೆ ಎಂದರು. ಅಲ್ಲದೆ ರಾಜ್ಯಗಳ ಮೇಲ್ಮನವಿ ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ವಾದಿಸಿದರು.
ಇನ್ನು ಕರ್ನಾಟಕದ ಪರ ವಾದ ಮಂಡಿಸಿದ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರು, ಕರ್ನಾಟಕದ ಮೇಲ್ಮನವಿ ವಿಚಾರಣೆಗೆ ಯೋಗ್ಯವಾಗಿದೆ ಎಂದರು. ಅಲ್ಲದೆ ಈ ಹಿಂದೆ ಕೋರ್ಟ್ ನೀಡಿದ ಆದೇಶದಂತೆ ಅಕ್ಟೋಬರ್ 7ರಿಂದ 18ರವರೆಗೆ ತಮಿಳುನಾಡಿಗೆ ನಿತ್ಯ ಎರಡು ಸಾವಿರ ಕ್ಯೂಸೆಕ್ಸ್ ನೀರು ಹರಿಸಿರುವುದಾಗಿ ತಿಳಿಸಿದರು.
ಈ ವೇಳೆ ತಮಿಳುನಾಡಿಗೆ ಮತ್ತಷ್ಟು ನೀರು ಬೇಕೆಂದು ತಮಿಳುನಾಡು ಪರ ವಕೀಲರು ವಾದಿಸಿದರು. ವಾದ ಪ್ರತಿವಾದ ಆಲಿಸಿದ ಕೋರ್ಟ್, ಮುಂದಿನ ಆದೇಶದವರೆಗೂ ತಮಿಳುನಾಡಿಗೆ 2 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿದೆ. ಅಲ್ಲದೆ ಎರಡೂ ರಾಜ್ಯಗಳು ಸಹ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದೆ.
2007ರಲ್ಲಿ ಕಾವೇರಿ ನ್ಯಾಯಾಧಿಕರಣ ಐ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ ಮೇಲ್ಮನವಿ ಸಲ್ಲಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ