ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಸರ್ಕಾರ ಪ್ರಯತ್ನಿಸುತ್ತಿದೆ : ಓವೈಸಿ

ಮೋದಿ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಹೇರಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಎ ಐ ಎಂ ಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಎ ಐ ಎಂ ಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಎ ಐ ಎಂ ಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಹೈದರಾಬಾದ್: ಮೋದಿ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಹೇರಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಎ ಐ ಎಂ ಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ. 
ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸಿ, ಮುಸ್ಲಿಮರು ಎರಡನೇ ದರ್ಜೆಯ ನಾಗರಿಕರು ಎಂದು ತೋರಿಸಲಿ ಹವಣಿಸುತ್ತಿದೆ ಎಂದು ಹೈದರಾಬಾದ್ ಸಂಸದ ಹೇಳಿದ್ದಾರೆ. 
ಬಹುತ್ವ ಮತ್ತು ವಿವಿಧತೆ ಭಾರತದ ಶಕ್ತಿ ಮತ್ತು ಸೌಂದರ್ಯ ಎಂದಿರುವ ಅವರು ಜಾತ್ಯಾತೀತತೆಯನ್ನು ನಾಶಮಾಡುವ ಯತ್ನ ದೇಶದ ಬಲ ಕುಂದಿಸಲಿದೆ ಎಂದಿದ್ದಾರೆ. 
ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕರೆದಿದ್ದ ಸಾರ್ವಜನಿಕ ಸಭೆಯಲ್ಲಿ ಓವೈಸಿ ಮಾತಾನಾಡುತ್ತಿದ್ದರು. ಬುಧವಾರ ರಾತ್ರಿ 8 ಘಂಟೆಗೆ ಪ್ರಾರಂಭವಾದ ಈ ಸಭೆ ಮಧ್ಯ ರಾತ್ರಿಯ ನಂತರವೂ ಮುಂದುವರೆದಿತ್ತು. 
ಮಹಿಳೆಯರು ಒಳಗೊಂಡಂತೆ ಸಾವಿರಾರು ಜನ ಭಾಗವಹಿಸಿದ್ದ ಈ ಸಭೆಯಲ್ಲಿ ಹಲವು ಇಸ್ಲಾಮಿಕ್ ಚಿಂತನೆಯ ಮತ್ತು ಮುಸ್ಲಿಂ ಒಳವರ್ಗಗಳ ಹಲವು ಮುಖಂಡರು ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. 
ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ನಡೆಸುವ ಯಾವುದೇ ಹಸ್ತಕ್ಷೇಪವನ್ನು ತಾವು ಸಹಿಸಿಕೊಳ್ಳುವುದಿಲ್ಲ ಎಂಬುದು ಸಭೆಯಲ್ಲಿ ಮಾತನಾಡಿದವರ ಒಮ್ಮತದ ಅಭಿಪ್ರಾಯವಾಗಿತ್ತು. 
ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಕುಚೋದ್ಯ ಮಾಡಿದ ಓವೈಸಿ, ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಮತ್ತು ಇತರ ದೇಶಗಳ ಮುಸ್ಲಿಮರಿಗೆ ಹೋಲಿಸಿರುವುದು ಕೇವಲ ಭಾರತೀಯ ಮುಸ್ಲಿಮರಿಗೆ ಮಾಡಿದ ಅವಮಾನವಲ್ಲ ಬದಲಾಗಿ ಇಡೀ ದೇಶವನ್ನು ಅವಮಾನಿಸಿದ್ದಾರೆ ಎಂದಿದ್ದಾರೆ. 
ಪಾಕಿಸ್ತಾನ ಚಟುವಟಿಕೆಯ ಪ್ರಜಾಪ್ರಭುತ್ವವಲ್ಲ ಮತ್ತು ಆ ಅರ್ಜಿಯಲ್ಲಿ ನಮೂದಿಸಲಾಗಿರುವ ಇತರ ದೇಶಗಳು ರಾಜಾಡಳಿತದಲ್ಲಿವೆ ಅಥವಾ ಭಾರತಕ್ಕೆ ಯಾವುದೇ ರೀತಿಯ ಹೋಲಿಕೆಯಿಲ್ಲದಂತಹವು ಎಂದು ಕೂಡ ಅವರು ಗಮನಿಸಿದ್ದಾರೆ. 
ಮಿಜೋರಾಂ ಮತ್ತು ನಾಗಾಲ್ಯಾಂಡ್ ರಾಜ್ಯಗಳಿಗೆ ನೀಡಿರುವ ವಿಶೇಷ ಸ್ಥಾನಮಾನಗಳನ್ನು ತೊಡೆದುಹಾಕಿ, ಗೋವಾದಲ್ಲಿನ ಮದುವೆ ಕಾನೂನನ್ನು ನಿಷೇಧಿಸುವ ಧೈರ್ಯ ಇದೆಯೇ ಎಂದು ಸರ್ಕಾರಕ್ಕೆ ಸವಾಲೆಸೆದಿದ್ದಾರೆ ಓವೈಸಿ. 
ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಿ, ಹಿಂದೂ ಸಂಘಟಿದ ಕುಟುಂಬಗಳಿಗೆ ಇರುವ ತೆರಿಗೆ ರಿಯಾಯಿತಿ ಸೌಕರ್ಯವನ್ನು ಮುಸ್ಲಿಮರಿಗೆ ವಿಸ್ತರಿಸಲು ಸರ್ಕಾರ ಸಿದ್ಧವಿದೆಯೇ ಎಂದು ಕೂಡ ಅವರು ಪ್ರಶ್ನಿಸಿದ್ದಾರೆ. 
ದಸರಾ ಕಾರ್ಯಕ್ರಮದಲ್ಲಿ ಧಾರ್ಮಿಕ ಘೋಷಣೆಗಳನ್ನು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಓವೈಸಿ ಈ ಹಿಂದೆ ಯಾವ ಪ್ರಧಾನಿಯೂ ಅಂತಹ ಘೋಷಣೆ ಮಾಡಿಲ್ಲ ಎಂದಿದ್ದಾರೆ. 
ಸಂವಿಧಾನದಲ್ಲಿ 16 ನಿರ್ದೇಶಿತ ಸೂತ್ರಗಳಿದ್ದರು ಸರ್ಕಾರ ಗೋಹತ್ಯೆ ಮತ್ತು ಏಕರೂಪ ನಾಗರಿಕ ಸಂಹಿತೆ ಬಗ್ಗೆಯಷ್ಟೇ ತಲೆಕೆಡಿಸಿಕೊಂಡಿರುವುದು ಏಕೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com